ವಾಷಿಂಗ್ಟನ್: ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಸಾವಿರಾರು ಭಾರತೀಯ ಟೆಕ್ಕಿಗಳಿಗೆ ತೀವ್ರ ಆಘಾತ ನೀಡುವ ಬೆಳವಣಿಗೆಯೊಂದರಲ್ಲಿ, ಟ್ರಂಪ್ ಆಡಳಿತವು ಮೈಕ್ರೋಸಾಫ್ಟ್ ಸೇರಿದಂತೆ ಪ್ರಮುಖ ಐಟಿ ದಿಗ್ಗಜ ಸಂಸ್ಥೆಗಳನ್ನು ಮಹತ್ವದ ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತುಗೊಳಿಸಿದೆ.
ವಿದೇಶಿ ನುರಿತ ಉದ್ಯೋಗಿಗಳಿಗೆ ಅಮೆರಿಕದಲ್ಲಿ ಶಾಶ್ವತ ವಾಸ್ತವ್ಯದ ಗ್ರೀನ್ ಕಾರ್ಡ್ ಕಲ್ಪಿಸುವ 'ಪರ್ಮನೆಂಟ್ ಲೇಬರ್ ಸರ್ಟಿಫಿಕೇಶನ್' (ಪಿಇಆರ್‌ಎಂ) ಪ್ರಕ್ರಿಯೆಗೆ ತಡೆ ಬಿದ್ದಿದೆ.
ಅಮೆರಿಕದ ಸ್ಥಳೀಯ ಉದ್ಯೋಗಿಗಳನ್ನು ಕಡೆಗಣಿಸಿ, ಕಡಿಮೆ ವೇತನಕ್ಕೆ ವಿದೇಶಿ ನೌಕರರನ್ನು ನೇಮಿಸಿಕೊಳ್ಳುವ ಮೂಲಕ ಕಂಪನಿಗಳು ವಂಚನೆ ಎಸಗುತ್ತಿವೆ ಎಂಬ ಗಂಭೀರ ಆರೋಪವನ್ನು ಅಮೆರಿಕನ್ ಅಧಿಕಾರಿಗಳು ಹೊರಿಸಿದ್ದಾರೆ ಎಂದು 'ರಾಯಿಟರ್ಸ್' ವರದಿ ಮಾಡಿದೆ.
ವಿದೇಶಿ ಕೌಶಲಯುತ ಮಾನವಸಂಪನ್ಮೂಲದ ಮೇಲೆ ಟ್ರಂಪ್ ಆಡಳಿತ ಕಠಿಣ ನಿಯಮಗಳನ್ನು ಹೇರುತ್ತಿರುವ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಏನಿದು (ಪಿಇಆರ್‌ಎಂ) ಪ್ರಕ್ರಿಯೆ?
ಬೃಹತ್ ತಂತ್ರಜ್ಞಾನ ಹಾಗೂ ಹೊರಗುತ್ತಿಗೆ (ಔಟ್‌ಸೋರ್ಸಿಂಗ್) ಸಂಸ್ಥೆಗಳು ವಿದೇಶಿ ನೌಕರರಿಗೆ ಗ್ರೀನ್ ಕಾರ್ಡ್ ಪ್ರಾಯೋಜಿಸಲು ಬಳಸುವ 'ಪರ್ಮನೆಂಟ್ ಲೇಬರ್ ಸರ್ಟಿಫಿಕೇಶನ್' (ಪಿಇಆರ್‌ಎಂ) ಕಾರ್ಯಕ್ರಮವೇ ಈ ಅಮಾನತಿಗೆ ಗುರಿಯಾಗಿದೆ.
ಹಿಂದಿನ 'ಏಲಿಯನ್ ಎಂಪ್ಲಾಯ್‌ಮೆಂಟ್ ಸರ್ಟಿಫಿಕೇಶನ್' ಪ್ರಕ್ರಿಯೆಯಲ್ಲಿದ್ದ ವಿಳಂಬವನ್ನು ತಪ್ಪಿಸಲು 2005ರಲ್ಲಿ 'ಪರ್ಮ್' ವ್ಯವಸ್ಥೆಯನ್ನು ಪರಿಚಯಿಸಲಾಯಿತು. ಈ ಯೋಜನೆಯಡಿ, ನುರಿತ ಅಮೆರಿಕನ್ ಉದ್ಯೋಗದಾತರು ಮಾತ್ರ ವಿದೇಶಿ ಉದ್ಯೋಗಿಯ ಶಾಶ್ವತ ವಾಸ್ತವ್ಯಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ವೈಯಕ್ತಿಕವಾಗಿ ಉದ್ಯೋಗಿಗಳು ಅರ್ಜಿ ಸಲ್ಲಿಸಲು ಬರುವುದಿಲ್ಲ.
ನಿರ್ದಿಷ್ಟ ಹುದ್ದೆಗೆ ಸೂಕ್ತ ಅರ್ಹತೆ ಹೊಂದಿರುವ ಸ್ಥಳೀಯ ಅಮೆರಿಕನ್ ಉದ್ಯೋಗಿಗಳು ಲಭ್ಯವಿಲ್ಲ ಎಂಬುದನ್ನು ಹಾಗೂ ವಿದೇಶಿ ಉದ್ಯೋಗಿಯ ನೇಮಕಾತಿಯಿಂದ ಸ್ಥಳೀಯರ ವೇತನ ಮತ್ತು ಕೆಲಸದ ವಾತಾವರಣದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂಬುದನ್ನು ಉದ್ಯೋಗದಾತರು ಯುಎಸ್ ಲೇಬರ್ ಡಿಪಾರ್ಟ್ಮೆಂಟ್ ಮೂಲಕ ಸಾಬೀತುಪಡಿಸಬೇಕಾಗುತ್ತದೆ.
ಭಾರತೀಯರಿಗೆ ಇದು ಏಕೆ ಅತ್ಯಂತ ಮುಖ್ಯ?
ಅಮೆರಿಕದಲ್ಲಿ ತಾತ್ಕಾಲಿಕ ಉದ್ಯೋಗದಿಂದ ಶಾಶ್ವತ ಗ್ರೀನ್ ಕಾರ್ಡ್ ಪಡೆಯುವ ಹಾದಿಯಲ್ಲಿ 'ಪಿಇಆರ್‌ಎಂ' ಪ್ರಮುಖ ಸೇತುವೆಯಾಗಿದೆ.
*ಬಹುತೇಕ ಐಟಿ ನೌಕರರು ಆರಂಭದಲ್ಲಿ ಎಚ್-1ಬಿ (H-1B) ತಾತ್ಕಾಲಿಕ ವೀಸಾದ ಮೂಲಕ ಅಮೆರಿಕ ಪ್ರವೇಶಿಸಿ, ನಂತರ ಕಂಪನಿಯ ಮೂಲಕ ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುತ್ತಾರೆ.
*ಈ ಪ್ರಕ್ರಿಯೆ ಸ್ಥಗಿತಗೊಂಡರೆ ಭಾರತೀಯರು ಸೇರಿದಂತೆ ಸಾವಿರಾರು ವಿದೇಶಿ ನೌಕರರು ಶಾಶ್ವತ ವಾಸ್ತವ್ಯದ ಅವಕಾಶವನ್ನು ಕಳೆದುಕೊಂಡು, ಸುದೀರ್ಘ ಕಾಲ ತಾತ್ಕಾಲಿಕ ವೀಸಾಗಳಲ್ಲೇ ಮುಂದುವರಿಯಬೇಕಾಗುತ್ತದೆ.
*ಜಾಗತಿಕ ಪ್ರತಿಭೆಗಳನ್ನು ಸೆಳೆಯುವ ಕಂಪನಿಗಳ ಸಾಮರ್ಥ್ಯಕ್ಕೂ ಇದು ಹೊಡೆತ ನೀಡಲಿದೆ. ಏಕೆಂದರೆ ಅಮೆರಿಕದಲ್ಲಿ ಶಾಶ್ವತ ನೆಲೆ ಕಂಡುಕೊಳ್ಳುವ ಭರವಸೆಯೇ ಬಹುತೇಕರು ಅಲ್ಲಿನ ಕೆಲಸವನ್ನು ಒಪ್ಪಿಕೊಳ್ಳಲು ಪ್ರಮುಖ ಕಾರಣವಾಗಿರುತ್ತದೆ.
ಯಾವೆಲ್ಲ ಕಂಪನಿಗಳ ಮೇಲೆ ಈ ನಿರ್ಬಂಧ?
ಅಮೆರಿಕ ಸರ್ಕಾರದ ಆದೇಶದ ಅನ್ವಯ ಮೈಕ್ರೋಸಾಫ್ಟ್ ಹಾಗೂ ಅಡೋಬ್ ಮಾತ್ರವಲ್ಲದೆ, ಭಾರತೀಯ ಮೂಲದ ಪ್ರಮುಖ ಸಂಸ್ಥೆಗಳಾದ ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ವಿಪ್ರೊ, ಎಚ್‌ಸಿಎಲ್ ಟೆಕ್ನಾಲಜೀಸ್, ಕಾಗ್ನಿಜೆಂಟ್ ಮತ್ತು ಕ್ಯಾಪ್‌ಜೆಮಿನಿ ಸಂಸ್ಥೆಗಳನ್ನು ಅಮಾನತುಗೊಳಿಸಲಾಗಿದೆ.
ಆದರೆ, ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್, ಮೆಟಾ ಹಾಗೂ ಅಮೆಜಾನ್‌ನಂತಹ ಇತರ ದೈತ್ಯ ಕಂಪನಿಗಳಿಗೆ ಈ ಕಾರ್ಯಕ್ರಮದಲ್ಲಿ ಮುಂದುವರಿಯಲು ಅನುಮತಿ ಇದೆ.
ಈಗ ಏಕೆ ಈ ಕ್ರಮ?
ವಿದೇಶಿ ವೀಸಾಗಳಿಂದಾಗಿ ಸ್ಥಳೀಯ ಅಮೆರಿಕನ್ನರ ಉದ್ಯೋಗಾವಕಾಶಗಳು ಕಸಿದುಕೊಳ್ಳಲ್ಪಡುತ್ತಿವೆ ಎಂಬ ವಾದವನ್ನು ಟ್ರಂಪ್ ಆಡಳಿತ ಬಲವಾಗಿ ಮಂಡಿಸುತ್ತಿದೆ. ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಈ ಬಗ್ಗೆ ಪ್ರತಿಕ್ರಿಯಿಸಿ, ಕಂಪನಿಗಳು ಅಗ್ಗದ ದರದಲ್ಲಿ ವಿದೇಶಿ ನೌಕರರನ್ನು ತಂದು ಸ್ಥಳೀಯರ ವೇತನ ಮಟ್ಟವನ್ನು ಕುಸಿಯುವಂತೆ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.
'ಮೈಕ್ರೋಸಾಫ್ಟ್‌ಗೆ ನಮ್ಮ ಸ್ಪಷ್ಟ ಸಂದೇಶವೇನೆಂದರೆ: ನೀವು ಅತ್ಯುತ್ತಮ ಅಮೆರಿಕನ್ ಕಂಪನಿ ನಿಜ, ಆದರೆ ನೀವು ಅತ್ಯುತ್ತಮ ಅಮೆರಿಕನ್ ಉದ್ಯೋಗಿಗಳನ್ನೇ ನೇಮಿಸಿಕೊಳ್ಳಬೇಕು' ಎಂದು ವ್ಯಾನ್ಸ್ ಎಚ್ಚರಿಸಿದ್ದಾರೆ.
ನುರಿತ ವಿದೇಶಿ ನೌಕರರ ಹೊಸ ಎಚ್-1ಬಿ ಅರ್ಜಿಗಳ ಮೇಲೆ ಟ್ರಂಪ್ ಆಡಳಿತ ಈ ಹಿಂದೆ ಹೇರಿದ್ದ $100,000 ಶುಲ್ಕಕ್ಕೆ ಫೆಡರಲ್ ನ್ಯಾಯಾಲಯ ತಡೆ ನೀಡಿದ ಬೆನ್ನಲ್ಲೇ ಈ ಹೊಸ ಕ್ರಮ ಹೊರಬಿದ್ದಿದೆ.
ಎಚ್-1ಬಿ ವೀಸಾ ಮತ್ತು ಗ್ರೀನ್ ಕಾರ್ಡ್ ನಡುವಿನ ವ್ಯತ್ಯಾಸವೇನು?
* ಎಚ್-1ಬಿ: ಇದು ತಾತ್ಕಾಲಿಕ ಉದ್ಯೋಗ ವೀಸಾ. ಇದರಡಿ ವಿದೇಶಿ ನುರಿತ ನೌಕರರು ಗರಿಷ್ಠ 6 ವರ್ಷಗಳವರೆಗೆ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶವಿರುತ್ತದೆ.
* ಪರ್ಮ್ (ಪಿಇಆರ್‌ಎಂ): ಇದು ಉದ್ಯೋಗ-ಆಧಾರಿತ ಶಾಶ್ವತ ನಿವಾಸ (ಗ್ರೀನ್ ಕಾರ್ಡ್) ಪಡೆಯಲು ಕಾರ್ಮಿಕ ಇಲಾಖೆ ನೀಡುವ ಪ್ರಮಾಣೀಕರಣ.
ಪ್ರಸ್ತುತ ಜಾರಿಗೆ ತರಲಾಗಿರುವ ಈ ಅಮಾನತು ಕ್ರಮವು ಈಗಾಗಲೇ ಎಚ್-1ಬಿ ವೀಸಾ ಹೊಂದಿ ಕಾರ್ಯನಿರ್ವಹಿಸುತ್ತಿರುವವರ ಮೇಲೆ ತಕ್ಷಣದ ನೇರ ಪರಿಣಾಮ ಬೀರದು. ಆದರೆ, ಅವರು ಮುಂದೆ ಗ್ರೀನ್ ಕಾರ್ಡ್ ಪಡೆಯುವ ಹಾದಿಯನ್ನು ಅನಿಶ್ಚಿತಗೊಳಿಸಲಿದೆ.
ಭಾರತದ ಸ್ಪಷ್ಟನೆ:
ಗ್ರೀನ್ ಕಾರ್ಡ್ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹೇಳಿಕೆ 'ಅನಗತ್ಯ ಹಾಗೂ ಆಧಾರರಹಿತ' ಎಂದು ಭಾರತೀಯ ವಿದೇಶಾಂಗ ಸಚಿವಾಲಯ (ಎಂಇಎ) ತಳ್ಳಿ ಹಾಕಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯವು, 'ಅಮೆರಿಕದ ಕಾರ್ಮಿಕ ಇಲಾಖೆಯ ನಿರ್ಧಾರದಿಂದ ಎಚ್-1ಬಿ ವೀಸಾ ಮಾನ್ಯತೆಗೆ ಧಕ್ಕೆಯಿಲ್ಲ' ಎಂದು ಹೇಳಿದೆ.
'ಪಿಇಆರ್‌ಎಂ ಮತ್ತು ಎಚ್-1ಬಿ ವೀಸಾ ಕಾರ್ಯಕ್ರಮಗಳು ಪರಸ್ಪರ ಭಿನ್ನವಾಗಿವೆ ಎಂಬುದನ್ನು ಗಮನಿಸಬೇಕಾಗಿದೆ. ಪ್ರಸ್ತುತ ಪಿಇಆರ್‌ಎಂ ಅರ್ಜಿಗಳ ಅಮಾನತು ನಿರ್ಧಾರದಿಂದಾಗಿ ಈಗಾಗಲೇ ಚಾಲ್ತಿಯಲ್ಲಿರುವ ಎಚ್-1ಬಿ ವೀಸಾಗಳ ಮಾನ್ಯತೆಗಾಗಲಿ, ವೀಸಾದಾರರು ಮತ್ತು ಅವರ ಅವಲಂಬಿತರ ಸ್ಥಾನಮಾನಕ್ಕಾಗಲಿ ಯಾವುದೇ ನೇರ ಧಕ್ಕೆಯಾಗುವುದಿಲ್ಲ. ಆದರೆ, ನಿರ್ಬಂಧಕ್ಕೆ ಒಳಗಾದ ಕಂಪನಿಗಳ ಅರ್ಹ ನೌಕರರ 'ಖಾಯಂ ನಿವಾಸಿ' ಅಥವಾ 'ಗ್ರೀನ್ ಕಾರ್ಡ್' ಪಡೆಯುವ ಪ್ರಕ್ರಿಯೆಯ ಮೇಲೆ ಅಲ್ಪಮಟ್ಟಿನ ಪರಿಣಾಮ ಬೀರುವ ಸಾಧ್ಯತೆಯಿದೆ' ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
'ಪ್ರತಿಭಾವಂತರ ಮುಕ್ತ ಸಂಚಾರವು ಭಾರತ ಹಾಗೂ ಅಮೆರಿಕ ಎರಡೂ ದೇಶಗಳ ಆರ್ಥಿಕತೆಗೂ ಮೌಲ್ಯವರ್ಧನೆ ತರುತ್ತದೆ' ಎಂದು ಉಲ್ಲೇಖಿಸಿದೆ.
'ಇದರಿಂದ ಭಾರತೀಯರಿಗೆ ಉತ್ತಮ ಉದ್ಯೋಗಾವಕಾಶಗಳು ದೊರೆಯುವುದರ ಜತೆಗೆ, ಅಮೆರಿಕದ ಕಂಪನಿಗಳಿಗೆ ಅತ್ಯಾಧುನಿಕ ಪ್ರತಿಭೆ, ನಾವೀನ್ಯತೆ, ಸಂಶೋಧನೆ, ಸ್ಪರ್ಧಾತ್ಮಕತೆ ಹಾಗೂ ಉದ್ಯೋಗ ಸೃಷ್ಟಿಗೆ ನೆರವಾಗಲಿದ್ದು, ಅಲ್ಲಿನ ಷೇರುದಾರರ ಸಂಪತ್ತನ್ನು ಹೆಚ್ಚಿಸಲಿದೆ' ಎಂದು ಹೇಳಿದೆ.
'ಅಲ್ಲದೆ ಎರಡೂ ರಾಷ್ಟ್ರಗಳಿಗೂ ಪರಸ್ಪರ ಲಾಭದಾಯಕ ಕ್ಷೇತ್ರವಾಗಿದ್ದು, ಈ ವಾಸ್ತವವನ್ನು ಎಲ್ಲ ಸಂಬಂಧಪಟ್ಟ ಪಾಲುದಾರರು ಅರ್ಥಮಾಡಿಕೊಳ್ಳಬೇಕಿದೆ. ಆದರೆ ಅಮೆರಿಕ ಪ್ರಕಟಿಸಿರುವ ಇತ್ತೀಚಿನ ಕ್ರಮಗಳು ಎರಡೂ ದೇಶಗಳ ಜಂಟಿ ಮಹತ್ವಾಕಾಂಕ್ಷೆಗಳಿಗೆ ಪೂರಕವಾಗಿಲ್ಲ' ಎಂದು ಭಾರತ ಬೇಸರ ವ್ಯಕ್ತಪಡಿಸಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕದ ಉಪಾಧ್ಯಕ್ಷರು ನೀಡಿರುವ ಹೇಳಿಕೆಗಳನ್ನು ಉಲ್ಲೇಖಿಸಿರುವ ಸಚಿವಾಲಯ, ಅಂತಹ ಹೇಳಿಕೆಗಳು ಅನಗತ್ಯ ಹಾಗೂ ಆಧಾರರಹಿತ ಎಂದು ತಳ್ಳಿಹಾಕಿದೆ.
'ಅಮೆರಿಕದಲ್ಲಿರುವ ಭಾರತೀಯ ವೃತ್ತಿಪರರು ಅತ್ಯುನ್ನತ ಶಿಕ್ಷಣ ಪಡೆದವರಾಗಿದ್ದು, ಆ ದೇಶದ ಆರ್ಥಿಕತೆ ಮತ್ತು ನಾವೀನ್ಯ ಪರಿಸರಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಅಮೆರಿಕದ ಇತಿಹಾಸವೇ ವಲಸಿಗರ ಕಠಿಣ ಪರಿಶ್ರಮ, ಉದ್ಯಮಶೀಲತೆ ಮತ್ತು ನಾವೀನ್ಯತೆಯಿಂದ ರೂಪಿತಗೊಂಡಿದೆ. ಇತಿಹಾಸದ ಕರಾಳ ನೆನಪುಗಳು ಹಾಗೂ ವಸಾಹತುಶಾಹಿ ಪರಂಪರೆಯನ್ನು ನೆನಪಿಸುವಂತಹ ಪದಪ್ರಯೋಗಗಳನ್ನು ಮಾಡಿರುವುದು ತೀವ್ರ ಆಕ್ಷೇಪಾರ್ಹ' ಎಂದು ಭಾರತ ಅಸಮಾಧಾನ ಹೊರಹಾಕಿದೆ.
'ಈ ಬೆಳವಣಿಗೆಯನ್ನು ಭಾರತ ಸರ್ಕಾರವು ಸೂಕ್ಷ್ಮವಾಗಿ ಗಮನಿಸುತ್ತಿದೆ' ಎಂದೂ ವಿದೇಶಾಂಗ ಸಚಿವಾಲಯ ತಿಳಿಸಿದೆ.



