ಮುಳ್ಳೇರಿಯ: ರಸ್ತೆಯಲ್ಲಿ ಅಡ್ಡ ಬಂದ ಕಾಡುಕೋಣವನ್ನು ತಪ್ಪಿಸಲು ಯತ್ನಿಸುವಾಗ ಸ್ಕೂಟರ್ ಮಗುಚಿಬಿದ್ದು ನರ್ಸಿಂಗ್ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ಸ್ಕೂಟರ್ ಸವಾರನ ವಿರುದ್ಧ ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರಿವೇಡಗಂ ತಂಗತ್ತಡ್ಕ ನಿವಾಸಿ ಅಮಲ್‌ರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ತಿಂಗಳ 21ರಂದು ಮುಂಜಾನೆ ಇರಿಯಣ್ಣಿ–ಬೋವಿಕ್ಕಾನ ರಸ್ತೆಯ ಮಂಜಕ್ಕಲ್ಲು ಎಂಬಲ್ಲಿ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಕರಿವೇಡಗಂ ತಂಗತ್ತಡ್ಕ ನಿವಾಸಿ ವಿ.ಆರ್. ಜಿತಿನ್ (19) ಗಾಯಗೊಂಡಿದ್ದರು.
ರಸ್ತೆಯಲ್ಲಿ ಕಾಡುಕೋಣ ಅಡ್ಡವಾಗಿ ಬರುತ್ತಿದ್ದ ಸಂದರ್ಭದಲ್ಲಿ ಅಜಾಗರೂಕತೆಯಿಂದ ಸ್ಕೂಟರ್ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಜಿತಿನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಸುಮಾರು ಒಂದು ತಿಂಗಳ ಕಾಲ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಪ್ರಕರಣದ ತನಿಖೆಯ ಭಾಗವಾಗಿ ಪೊಲೀಸರು ವಿದ್ಯಾರ್ಥಿನಿಯ ಮನೆಗೆ ತೆರಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 281 ಮತ್ತು 125(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತದ ದಿನ ಕಾಡುಕೋಣವೇ ಸ್ಕೂಟರ್‌ಗೆ ಡಿಕ್ಕಿ ಹೊಡೆದಿತ್ತು ಎಂದು ಹೇಳಲಾಗಿತ್ತು. ಸ್ಕೂಟರ್ ಚಲಾಯಿಸುತ್ತಿದ್ದ ಅಮಲ್‌ರಾಜ್ ಕೂಡ ಗಾಯಗೊಂಡಿದ್ದರು.
ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಸ್ಕೂಟರ್‌ನಲ್ಲಿ ಕಾಸರಗೋಡು ರೈಲು ನಿಲ್ದಾಣಕ್ಕೆ ಕರೆದೊಯ್ಯುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು.



