ಕಾಸರಗೋಡು: ಮುಂಜಾನೆ ವಾಯು ವಿಹಾರಕ್ಕಾಗಿ ನಡೆದು ಹೋಗುತ್ತಿದ್ದ ಗೃಹಿಣಿಗೆ ಢಿಕ್ಕಿ ಹೊಡೆದ ಬಳಿಕ ನಿಲ್ಲಿಸದೆ ಲಾರಿ ಸಹಿತ ಪರಾರಿಯಾದ ಚಾಲಕನನ್ನು ಬಂಧಿಸಲಾಗಿದೆ. ಮಲಪ್ಪುರಂ ವಳಕ್ಕುಳಂ ಕೋಳಿಚ್ಚೇನ ಅಕ್ಕಪರಂಬಿಲ್ ಹೌಸ್ನ ಕೆ. ಪ್ರವೀಣ್ (35) ಎಂಬಾತನನ್ನು ಪರಿಯಾರಂ ಸರ್ಕಲ್ ಇನ್ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ಹಾಗೂ ತಂಡ ಬಂಧಿಸಿದೆ. ನಿನ್ನೆ ಮುಂಜಾನೆ ಪಳಯಂಗಾಡಿ ಅಡುತ್ತಿಲ ಕೆಎಸ್ಟಿಪಿ ರಸ್ತೆಯಲ್ಲಿ ಅಪಘಾತವುಂಟಾಗಿತ್ತು. ಪಳಯಂಗಾಡಿಯ ಕೆ. ಸುಲೋಚನ (52)ರಿಗೆ ವಾಹನ ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಇವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಬಗ್ಗೆ ತನಿಖೆ ಆರಂಭಿಸಿದ ಪಳಯಂಗಾಡಿ ಪೊಲೀಸರು ಘಟನೆ ಸ್ಥಳದಿಂದ ಕಣ್ಣೂರು ವರೆಗಿನ ಸುಮಾರು ೩೦ರಷ್ಟು ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ ಸುಲೋಚನರಿಗೆ ಢಿಕ್ಕಿ ಹೊಡೆದ ಲಾರಿಯ ಕುರಿತು ಸೂಚನೆ ಲಭಿಸಿದೆ. ಕಣ್ಣೂರು ಚಾಲಾದ ಖಾಸಗಿ ಆಸ್ಪತ್ರೆಯೊಂದರ ಹಿಂಭಾಗದಲ್ಲಿ ನಿಲ್ಲಿಸಿದ್ದ ಲಾರಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.


