ಬದಿಯಡ್ಕ: ಪಂಚಮವೇದವೆಂದೇ ಕರೆಯಲ್ಪಡುವ ಶಾಸ್ತ್ರೀಯ ಸಂಗೀತಕ್ಕೆ ಸಾವಿರಾರು ವರ್ಷಗಳ ದೀರ್ಘ ಪರಂಪರೆಯಿದ್ದು, ಅದು ತಲೆಮಾರಿನಿಂದ ತಲೆಮಾರಿಗೆ ಯಾವುದೇ ಕಳಂಕವಿಲ್ಲದೆ ಹರಿದುಬರುತ್ತಿದೆ ಎಂದು ಪುತ್ತೂರಿನ ದ್ವಾರಕಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ಹೇಳಿದರು.
ಬಳ್ಳಪದವು ವೀಣಾವಾದಿನಿ ಸಂಗೀತ ವಿದ್ಯಾಪೀಠದಲ್ಲಿ ವಿಜಯದಶಮಿ ಅಂಗವಾಗಿ ನಡೆದ ಸಂಗೀತೋತ್ಸವದ ಸಂದರ್ಭದಲ್ಲಿ, ಸಂಗೀತ ವಿದ್ವಾಂಸ ಯೋಗೀಶ್ ಶರ್ಮ ಬಳ್ಳಪದವು ಅವರು ರಚಿಸಿದ 'ಸಂಗೀತ ಪಾಠಮಾಲಿಕೆ' ಪುಸ್ತಕದ ಪರಿಷ್ಕøತ ನಾಲ್ಕನೇ ಆವೃತ್ತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಂಗೀತ ವಿದ್ಯಾರ್ಥಿಗಳಿಗೆ ಉಪಯುಕ್ತ ಗ್ರಂಥ
ಶಾಸ್ತ್ರೀಯ ಸಂಗೀತದ ಆರಂಭಿಕ ಹಂತದ ಕಲಿಕೆಗೆ ಈ ಪುಸ್ತಕ ಉತ್ತಮ ಆಕರ ಗ್ರಂಥವಾಗಿದೆ. ಸಂಗೀತ ವಿದ್ಯಾರ್ಥಿಗಳಿಗೆ ಇಂತಹ ಪುಸ್ತಕಗಳು ಅತ್ಯಗತ್ಯ. ಪುಸ್ತಕದ ಪರಿಷ್ಕೃತ ನಾಲ್ಕನೇ ಮುದ್ರಣ ಬಿಡುಗಡೆಯಾಗಿರುವುದೇ ಅದರ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದು ಗೋಪಾಲಕೃಷ್ಣ ಭಟ್ ಅಭಿಪ್ರಾಯಪಟ್ಟರು.
ವೀಣಾವಾದಿನಿ ಸಂಸ್ಥೆಯ ಹಿತೈಷಿ, ಬೆಂಗಳೂರಿನ ಕುಡುಪುಳಿ ಸುಬ್ರಹ್ಮಣ್ಯ ಭಟ್ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ ಮಾತನಾಡಿದರು. ಅತಿಥಿ ಗೋಪಾಲಕೃಷ್ಣ ಭಟ್ ಅವರ ಸಾಮಾಜಿಕ ಚಟುವಟಿಕೆಗಳ ಬಗ್ಗೆಯೂ ವಿವರವಾಗಿ ಪರಿಚಯಿಸಿದರು.
ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ್ ಪೆರ್ಲ ಶುಭಾಶಂಸನೆಗೈದರು.
27 ವರ್ಷಗಳಿಂದ ಸಂಗೀತ ಶಿಕ್ಷಣದ ಸೇವೆ
ಬಳ್ಳಪದವಿನ ವೀಣಾವಾದಿನಿ ಸಂಗೀತ ವಿದ್ಯಾಪೀಠವು ಕಳೆದ 27 ವರ್ಷಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಸಂಗೀತ ಶಿಕ್ಷಣ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡಿದೆ.
ಯುವ ಪೀಳಿಗೆ ಸಂಸ್ಕೃತಿಯ ಮುಖವಾಣಿಯಾಗಿ ಬೆಳೆಯಲು ಹಾಗೂ ಸಂಗೀತ ಪರಂಪರೆಯನ್ನು ಮುಂದಿನ ತಲೆಮಾರಿಗೆ ತಲುಪಿಸಲು ಇಂತಹ ಸಂಸ್ಥೆಗಳನ್ನು ಬೆಂಬಲಿಸುವುದು ಅಗತ್ಯ ಎಂದು ಗೋಪಾಲಕೃಷ್ಣ ಭಟ್ ಹೇಳಿದರು.
ಸಂಗೀತ ಪಾಠಮಾಲಿಕೆಯ ಲೇಖಕ ಯೋಗೀಶ್ ಶರ್ಮ ಬಳ್ಳಪದವು ಅವರು ಪುಸ್ತಕದ ಕುರಿತು ಹಾಗೂ ವೀಣಾವಾದಿನಿ ಸಂಗೀತ ವಿದ್ಯಾಪೀಠ ನಡೆದುಬಂದ ಹಾದಿಯ ಕುರಿತು ಮಾತನಾಡಿದರು. ವಯಲಿನ್ ವಿದ್ವಾಂಸ ಪ್ರಭಾಕರ ಕುಂಜಾರು ಶುಭಾಶಂಸನೆಗೈದರು. ಶಿರಾಮಕೃಷ್ಣ ಕಾಟುಕುಕ್ಕೆ ಅವರನ್ನು ಗೌರವಿಸಲಾಯಿತು.
ನೂತನ ವಿದ್ಯಾರ್ಥಿಗಳ ಸಂಗೀತಾರಂಭ
ವಿಜಯದಶಮಿಯ ಶುಭದಿನವಾದ ಬುಧವಾರ ಬೆಳಗ್ಗೆ ಸರಸ್ವತಿ ಪೂಜೆಯ ಬಳಿಕ ಸಂಗೀತ ಕಲಿಯಲು ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಸಂಗೀತಾರಂಭ ಕಾರ್ಯಕ್ರಮ ಶಾಸ್ತ್ರೀಯವಾಗಿ ನಡೆಯಿತು.
ನಂತರ ಸಂಸ್ಥೆಯ ವಿದ್ಯಾರ್ಥಿಗಳಾದ ಶೋಭನಾ ಯಮುರ್ಂಜ ಮತ್ತು ಕುಮಾರಿ ಆದ್ಯಾ ಪಿ. ಸಂಗೀತ ಕಛೇರಿ ನಡೆಸಿಕೊಟ್ಟರು.
ಪಕ್ಕವಾದ್ಯದಲ್ಲಿ ಪ್ರಭಾಕರ ಕುಂಜಾರು ಹಾಗೂ ಜಗದೀಶ್ ಕೊರಕ್ಕಾನ (ವಯಲಿನ್), ಆಶ್ಲೇಷಾ ಪಿ. ಮತ್ತು ವಿಶ್ವಾಸ್ ಪದಾಣ (ಮೃದಂಗ), ಪರಾಶರ ಶರ್ಮ ಯು. ಹಾಗೂ ವಿಶ್ರುತ್ ಬಿ. (ಘಟಂ) ಸಹಕರಿಸಿದರು.

.jpg)
.jpg)
