ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಅಕ್ಟೋಬರ್ 11ರಿಂದ 22ರವರೆಗೆ ವಿಜಯದಶಮಿಯೊಂದಿಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮದಿಂದ ಸಂಪನ್ನಗೊಂಡವು.
ವಿದ್ಯಾರ್ಥಿಗಳ ವಿದ್ಯಾಭ್ಯುದಯಕ್ಕಾಗಿ ಸರಸ್ವತೀ ಹವನ, ಶಾರದಾ ಪ್ರತಿಷ್ಠೆ, ವಾಹನ ಪೂಜೆ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳು ನಡೆದವು. ವಿಜಯದಶಮಿಯಂದು ಸಾನಿಧ್ಯದಲ್ಲಿರುವ ಗಾಯತ್ರೀ ಮಾತೆಗೆ ವಿಶೇಷ ಸೀಯಾಳಾಭಿಷೇಕ ಹಾಗೂ ತೆನೆಪೂಜೆ ನೆರವೇರಿಸಲಾಯಿತು. ಪೂಜ್ಯ ಸ್ವಾಮೀಜಿಯವರ ಅಮೃತಹಸ್ತದಿಂದ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಮಹಾನವಮಿಯಂದು ಶಾರದಾ ವಿಸರ್ಜನಾ ಕಾರ್ಯಕ್ರಮ ನಡೆಯಿತು.
ಸಂಗೀತ ಮತ್ತು ನೃತ್ಯಾರ್ಚನೆ
ಉತ್ಸವದ ಅಂಗವಾಗಿ ಕೊಂಡೆವೂರಿನ ನಾದನಿನಾದ ಸಂಗೀತ ತರಬೇತಿ ಕೇಂದ್ರದ ವತಿಯಿಂದ ಸಂಗೀತಾರ್ಚನೆ ನಡೆಯಿತು. ಮಂಗಳೂರಿನ ಸವಿಜೀವನಂ ನೃತ್ಯಕಲಾ ಟ್ರಸ್ಟ್‌ನ ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಭಗವನ್ನಾಮದ ಮಧುರ ಹಿನ್ನೆಲೆಯೊಂದಿಗೆ ‘ನೃತ್ಯ ಸಿಂಚನ’ ಸೇವೆಯನ್ನು ಪ್ರಸ್ತುತಪಡಿಸಿದರು.
ಶಾರದಾ ವಿಸರ್ಜನಾ ಕಾರ್ಯಕ್ರಮದಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದ ಸಂಸದ ರಾಜಮೋಹನ್ ಉಣ್ಣಿತ್ತಾನ್ ಭಾಗವಹಿಸಿದ್ದರು. ಧಾರ್ಮಿಕ ಶ್ರದ್ಧೆ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನವರಾತ್ರಿ ಉತ್ಸವ ಸಮಾಪನಗೊಂಡಿತು.



