ಲಕ್ನೋ: ಮಾಜಿ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ ಶರಣ್ ಸಿಂಗ್ ಅವರನ್ನು ಮೊದಲ ಬಾರಿಗೆ ಉತ್ತರ ಪ್ರದೇಶ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಮಿತಿಗೆ ಸೇರಿಸಿಕೊಳ್ಳಲಾಗಿದೆ. ಸುಮಾರು ಮೂರು ತಿಂಗಳ ಹಿಂದೆ ದಿಲ್ಲಿ ನ್ಯಾಯಾಲಯವು ಮಹಿಳಾ ಕುಸ್ತಿಪಟುಗಳು ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಂಗ್ ಅವರನ್ನು ಖುಲಾಸೆಗೊಳಿಸಿತ್ತು.
ಅ.26ರಂದು ಉ.ಪ್ರ.ಬಿಜೆಪಿ ಅಧ್ಯಕ್ಷ ಪಂಕಜ್ ಚೌಧರಿ ಅವರು ರಚಿಸಿದ ನೂತನ ಸಮಿತಿಯಲ್ಲಿ ಸಿಂಗ್ ಅವರ ಹೆಸರು ಸೇರಿದೆ. 2027ರ ಉ.ಪ್ರ.ವಿಧಾನಸಭೆ ಚುನಾವಣೆಗಾಗಿ ಪಕ್ಷದ ಕಾರ್ಯತಂತ್ರವನ್ನು ಚರ್ಚಿಸಲು ಶುಕ್ರವಾರ ಲಖನೌದಲ್ಲಿ ಆಯೋಜಿಸಲಾಗಿದ್ದ ಸಭೆಗೂ ಮುನ್ನ ಈ ಸಮಿತಿ ರಚಿಸಲಾಗಿದೆ. ಗೊಂಡಾ ಜಿಲ್ಲೆಯಿಂದ ಈ ಸಮಿತಿಗೆ ಆಯ್ಕೆಯಾಗಿರುವ ಏಳು ನಾಯಕರಲ್ಲಿ ಸಿಂಗ್ ಸೇರಿದ್ದಾರೆ.
ನಾಲ್ಕು ದಶಕಗಳ ರಾಜಕೀಯ ಅನುಭವ ಹೊಂದಿದ್ದು ಆರು ಬಾರಿ ಮಾಜಿ ಸಂಸದರಾಗಿದ್ದರೂ, ಸಿಂಗ್ ಅವರಿಗೆ ರಾಷ್ಟ್ರೀಯ ಅಥವಾ ರಾಜ್ಯ ಮಟ್ಟದ ಬಿಜೆಪಿ ಸಂಘಟನೆಯಲ್ಲಿ ಯಾವುದೇ ಹುದ್ದೆ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಅವರು ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ ಎಂದು ಪಕ್ಷದ ನಾಯಕರೋರ್ವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಸಿಂಗ್ ವಿರುದ್ಧದ ಆರೋಪಗಳ ಹಿನ್ನೆಲೆಯಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಅವರಿಗೆ ಟಿಕೆಟ್ ನೀಡಿರಲಿಲ್ಲ. ಬದಲಿಗೆ ಸಿಂಗ್ ಹಿಂದೆ ಪ್ರತಿನಿಧಿಸಿದ್ದ ಕೈಸರ್‌ಗಂಜ್ ಕ್ಷೇತ್ರದಿಂದ ಅವರ ಕಿರಿಯ ಮಗ ಕರಣ್ ಭೂಷಣ್ ಸಿಂಗ್ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ನ್ಯಾಯಾಲಯದಿಂದ ಖುಲಾಸೆಯಾಗಿರುವುದರಿಂದ ಸಿಂಗ್ ಅವರು ಮತ್ತೆ ಬಿಜೆಪಿ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಬಹುದು. ಅವರು 2029ರ ಲೊಕಸಭಾ ಚುನಾವಣೆಯಲ್ಲಿ ಮಗನ ಬದಲಿಗೆ ತನಗೇ ಟಿಕೆಟ್ ಕೋರಬಹುದು ಮತ್ತು ಪಕ್ಷವೂ ಅದಕ್ಕೆ ಪೂರಕವಾಗಿ ಸ್ಪಂದಿಸಬಹುದು ಹಾಗೂ ಬೇರೆ ಕಡೆಗಳಲ್ಲಿ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳಬಹುದು ಎಂದು ಹಿರಿಯ ಬಿಜೆಪಿ ನಾಯಕರೋರ್ವರು ಹೇಳಿದರು.
ಪೂರ್ವ ಉತ್ತರ ಪ್ರದೇಶದಲ್ಲಿ ಪ್ರಭಾವಿ ನಾಯಕರಾಗಿರುವ ಸಿಂಗ್, ಬಿಜೆಪಿ ಅಭ್ಯರ್ಥಿಯಾಗಿ ಐದು ಬಾರಿ ಮತ್ತು ಸಮಾಜವಾದಿ ಪಕ್ಷದಿಂದ ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದರು.
ಸಿಂಗ್ ವಿರುದ್ಧದ ಆರೋಪಗಳು ರಾಜಕೀಯ ಪಿತೂರಿಯ ಭಾಗವಾಗಿದ್ದವು ಎಂದು ಉ.ಪ್ರ.ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ ಪ್ರತಿಪಾದಿಸಿದ್ದಾರೆ.
ಆಗಸ್ಟ್ 3ರಂದು ದಿಲ್ಲಿಯ ವಿಚಾರಣಾ ನ್ಯಾಯಾಲಯವು ಸಿಂಗ್ ಅವರನ್ನು ಲೈಂಗಿಕ ಕಿರುಕುಳ ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಆದರೆ ಈ ತೀರ್ಪನ್ನು ಪ್ರಶ್ನಿಸಿ ನಾಲ್ವರು ಮಹಿಳಾ ಕುಸ್ತಿಪಟುಗಳು ಮೇಲ್ಮನವಿಯನ್ನು ಸಲ್ಲಿಸಿದ್ದು,ಅ.28ರಂದು ನ್ಯಾಯಾಲಯವು ಅದಕ್ಕೆ ಉತ್ತರಿಸಲು ಸಿಂಗ್ ಅವರಿಗೆ ಒಂದು ವಾರದ ಕಾಲಾವಕಾಶ ನೀಡಿದೆ.



