HEALTH TIPS

ಮೆಕ್ಕಾ ಮಸೀದಿಯಲ್ಲಿ ಮುತ್ತಿಟ್ಟ ಆರೋ‍ಪಕ್ಕೆ ಪ್ರಾಣ ತೆತ್ತ ಜೋಡಿ: ಏನಿದು ತಅಝೀರ್?

ಮುಸ್ಲಿಮರ ಪವಿತ್ರ ಧಾರ್ಮಿಕ ಕೇಂದ್ರ ಮೆಕ್ಕಾದ ಮಸೀದಿಯೊಳಗೆ 'ಅಸಭ್ಯ'ವಾಗಿ ವರ್ತಿಸಿದ ಆರೋಪದ ಮೇಲೆ ಬಾಂಗ್ಲಾದೇಶದ ಜೋಡಿಗೆ ಮರಣದಂಡನೆ ವಿಧಿಸಿದ ಸೌದಿ ಅರೇಬಿಯಾದ ಕ್ರಮಕ್ಕೆ ವಿಶ್ವದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.


ಯಾವುದೇ ಮಾಹಿತಿ ಹಂಚಿಕೊಳ್ಳದೇ ತನ್ನ ಪ್ರಜೆಗಳಿಗೆ ಮರಣದಂಡನೆ ವಿಧಿಸಿದ ಸೌದಿ ಅರೇಬಿಯಾದ ನಡೆಗೆ ಬಾಂಗ್ಲಾದೇಶವು ಅಸಮಾಧಾನ ವ್ಯಕ್ತಪಡಿಸಿದ್ದು, ಘಟನೆ ಬಗ್ಗೆ ವಿವರಣೆ ಕೇಳಿ ಪತ್ರ ಬರೆದಿದೆ. 

ಆರೋಪಿಗಳಾದ ನಜ್ರುಲ್ ಇಸ್ಲಾಂ ಅಬ್ದುಲ್ ಬಶೀರ್ ಮತ್ತು ಸಿರಿ ಅಖ್ತರ್ ಅವರಿಗೆ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ತಅಝೀರ್ (Ta'zir) ಶಿಕ್ಷೆ ವಿಧಿಸಲಾಗಿತ್ತು ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯ ತಿಳಿಸಿದೆ. ಈ ಕಾನೂನಿನಡಿ ಶಿಕ್ಷೆಯನ್ನು ಮೊದಲೇ ನಿಗದಿಪಡಿಸದೇ, ನ್ಯಾಯಾಧೀಶರ ವಿವೇಚನೆಗೆ ಬಿಡಲಾಗುತ್ತದೆ.

ಆರೋಪಿಗಳ ಕೃತ್ಯವೇನು, ಯಾವ ಮಸೀದಿಯಲ್ಲಿ ಘಟನೆ ನಡೆದಿದೆ, ಇಬ್ಬರನ್ನು ಯಾವಾಗ ಬಂಧಿಸಲಾಯಿತು ಎಂಬ ವಿವರಗಳನ್ನು ಸಚಿವಾಲಯ ಬಹಿರಂಗಪಡಿಸಿಲ್ಲ. ಈ ನಡುವೆ, ಹಲವು ಮಾಧ್ಯಮಗಳು ಅವರನ್ನು ದಂಪತಿ ಎಂದು ಕರೆದಿದ್ದು, ಅವರು ವಿವಾಹವಾಗಿದ್ದರೇ ಎಂಬುದು ಇನ್ನೂ ದೃಢಪಟ್ಟಿಲ್ಲ.

ಮರಣದಂಡನೆ: ಸೌದಿ ಅರೇಬಿಯಾದ ವಾದವೇನು?

ಮಸೀದಿಯ ಆವರಣದೊಳಗೆ ಆರೋಪಿಗಳು ಅಸಭ್ಯವಾಗಿ ನಡೆದುಕೊಂಡಿರುವ ಆರೋಪ ಕೇಳಿಬಂದಿದ್ದು, ತಕ್ಷಣ ಅವರನ್ನು ಭದ್ರತಾ ಅಧಿಕಾರಿಗಳು ಬಂಧಿಸಿ ತನಿಖೆ ನಡೆಸಿದ್ದಾರೆ. ನಂತರ ಪ್ರಕರಣವನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಒಪ್ಪಿಸಿದ್ದರು ಎಂದು ಸಚಿವಾಲಯವು ತಿಳಿಸಿದೆ.

ಅಪರಾಧದ ಗಂಭೀರತೆ, ಮಸೀದಿಯ ಪವಿತ್ರತೆ ಮತ್ತು ಕೃತ್ಯಗಳು ನಡೆದ ಸಂದರ್ಭಗಳನ್ನು ಪರಿಗಣಿಸಿ ನ್ಯಾಯಾಲಯವು ಅವರನ್ನು ದೋಷಿಗಳೆಂದು ಘೋಷಿಸಿ ಮರಣದಂಡನೆ ವಿಧಿಸಿತು ಎಂದು ಹೇಳಿದೆ.

ಆದರೆ, ಕಾನೂನಿನ ಯಾವ ವಿಧಿಯಡಿ ಅವರನ್ನು ದೋಷಿಗಳೆಂದು ನಿರ್ಧರಿಸಲಾಯಿತು ಎಂಬುದನ್ನು ಅದು ಬಹಿರಂಗಪಡಿಸಿಲ್ಲ. ಇಬ್ಬರಿಗೂ ಕಾನೂನು ಪ್ರತಿನಿಧಿಗಳ ನೆರವು ದೊರೆತಿತ್ತೇ? ಎಂಬ ಬಗ್ಗೆಯೂ ವಿವರ ನೀಡಿಲ್ಲ.

ಮಸೀದಿಗಳ ಪಾವಿತ್ರತೆಗೆ ಧಕ್ಕೆ ತರುವವರು ಸೌದಿ ಕಾನೂನಿನಡಿ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಸಿದೆ.

ಅಸಮಾಧಾನ ವ್ಯಕ್ತಪಡಿಸಿದ ಬಾಂಗ್ಲಾ:

ಮರಣದಂಡನೆ ಜಾರಿಗೊಳಿಸುವ ಮೊದಲು ಯಾವುದೇ ಮಾಹಿತಿ ನೀಡದಿರುವುದಕ್ಕೆ ಬಾಂಗ್ಲಾದೇಶ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣದ ವಿವರಗಳು ಮತ್ತು ಮರಣದಂಡನೆ ಜಾರಿಗೊಳಿಸಿದ ಸಂದರ್ಭಗಳ ಕುರಿತು ವಿವರಣೆ ನೀಡುವಂತೆ ಅದು ಕೇಳಿದೆ.

ಜೆಡ್ಡಾದಲ್ಲಿರುವ ಬಾಂಗ್ಲಾದೇಶದ ಕಾನ್ಸುಲೇಟ್ ಜನರಲ್‌ಗೂ ಈ ಕುರಿತು ಮುಂಚಿತವಾಗಿ ಮಾಹಿತಿ ನೀಡಲಾಗಿರಲಿಲ್ಲ ಎಂದು ದಿ ಡೈಲಿ ಸ್ಟಾರ್ ವರದಿ ಮಾಡಿದೆ.

'ತಅಝೀರ್' ಎಂದರೇನು:

ಇಸ್ಲಾಮಿಕ್ ಅಪರಾಧ ಕಾನೂನನ್ನು ಹದ್ದ್ (Hadd), ಕಿಸಾಸ್ (Qisas), ತಅಝೀರ್ (Ta'zir) ಎಂದು ಮೂರು ಪ್ರಮುಖ ವರ್ಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಮೊದಲೆರಡು ಕಾನೂನಿನಲ್ಲಿ ಅಪರಾಧಗಳಿಗೆ ಶಿಕ್ಷೆಯನ್ನು ಮೊದಲೇ ನಿಗದಿಪಡಿಸಲಾಗಿರುತ್ತದೆ. ಆದರೆ ತಅಝೀರ್ ಕಾನೂನಿನಲ್ಲಿ ಶಿಕ್ಷೆಯನ್ನು ನಿರ್ಧರಿಸಲು ನ್ಯಾಯಾಧೀಶರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ.

- ಇತರ ದೇಶಗಳಂತೆ ಸೌದಿ ಅರೇಬಿಯಾದಲ್ಲಿ ನಿರ್ದಿಷ್ಟ ನ್ಯಾಯ ಸಂಹಿತೆ ಇಲ್ಲ. ಇದರಿಂದ ಅಲ್ಲಿನ ನ್ಯಾಯಾಧೀಶರಿಗೆ ಅಪರಾಧಗಳಿಗೆ ಶಿಕ್ಷೆ ನಿರ್ಧರಿಸುವಲ್ಲಿ ಹೆಚ್ಚಿನ ವಿವೇಚನೆಯ ಅಧಿಕಾರ ದೊರೆಯುತ್ತದೆ. ತಾವು ನೀಡಿದ ತೀರ್ಪುಗಳಿಗೆ ನ್ಯಾಯಾಧೀಶರು ಬದ್ಧರಾಗಿಬೇಕಾಗಿಯೂ ಇಲ್ಲ

ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆಯು 2008ರಲ್ಲಿ ಪ್ರಕಟಿಸಿದ ವರದಿಯ ಪ್ರಕಾರ, ಸೌದಿ ಅರೇಬಿಯಾದ ಹೆಚ್ಚಿನ ಅಪರಾಧ ಪ್ರಕರಣಗಳು ತಅಝೀರ್ ವರ್ಗಕ್ಕೆ ಸೇರಿದ್ದವಾಗಿವೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries