ನವದೆಹಲಿ: ನಿಷೇಧಿತ ಉದ್ದೀಪನ ಮದ್ದು ಹಂಚಿಕೆ ಮತ್ತು ಸೇವನೆಯನ್ನು ಶಿಕ್ಷಾರ್ಹ ಅಪರಾಧ ಸಂಹಿತೆಯಡಿಯಲ್ಲಿ ತರುವ ಪರಿಷ್ಕೃತ 'ಉದ್ದೀಪನ ಮದ್ದು ತಡೆ ಕಾಯ್ದೆ'ಯನ್ನು ಮುಂಬರುವ ಲೋಕಸಭೆ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಕ್ರೀಡಾ ಸಚಿವ ಮನ್ಸೂಖ ಮಾಂಡವೀಯ ಹೇಳಿದ್ದಾರೆ.
ಮಂಗಳವಾರ ಇಲ್ಲಿ ನಡೆದ 'ಕ್ರೀಡೆಯಲ್ಲಿ ಉದ್ದೀಪನ ಮದ್ದು ಸೇವನೆ ತಡೆ' ಕುರಿತು ಯುನೆಸ್ಕೊ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
'ಪ್ರತಿಯೊಬ್ಬ ಅಥ್ಲೀಟ್‌ಗೂ ಸ್ಪರ್ಧಿಸಲು ಸಮಾನವಾದ ಅವಕಾಶ ಸಿಗಬೇಕು. ಪ್ರತಿಭೆ, ಸಿದ್ಧತೆ ಮತ್ತು ಕಠಿಣ ಶ್ರಮದಿಂದ ಯಶಸ್ಸು ಗಳಿಸಬೇಕು. ಆದರೆ ನಿಷೇಧಿತ ಮದ್ದುಗಳನ್ನು ಸೇವನೆ ಮಾಡುವ ಅಡ್ಡಹಾದಿಯಿಂದ ಯಶಸ್ಸು ಪಡೆಯುವ ಪ್ರಯತ್ನ ಸಲ್ಲದು' ಎಂದು ಮಾಂಡವೀಯ ಹೇಳಿದರು.
'2025-26ನೇ ಸಾಲಿನಲ್ಲಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕವು (ನಾಡಾ) ಏಳು ಸಾವಿರಕ್ಕೂ ಹೆಚ್ಚು ಪರೀಕ್ಷೆಗಳನ್ನು ಸಂಘಟಿಸಿತ್ತು' ಎಂದರು.



