ಪಣಜಿ: ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ತಕ್ಷಣವೇ ಶೇ 20ಕ್ಕಿಂತ ಹೆಚ್ಚು ಮಾಡುವ ಆಲೋಚನೆಯನ್ನು ಸರ್ಕಾರ ಹೊಂದಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಮಾತನಾಡಿದ ಅವರು, ಇ20 ಇಂಧನದ ವಿಚಾರವಾಗಿ ಕೃತಕವಾದ ಸಂಕಥನವೊಂದನ್ನು ಸೃಷ್ಟಿಸಲಾಗಿತ್ತು ಎಂದು ದೂರಿದ್ದಾರೆ.
'ವಾಹನಗಳು ನಿಂತುಹೋಗುತ್ತಿವೆ, ಎಂಜಿನ್ ಪೂರ್ತಿಯಾಗಿ ಹಾಳಾಗುತ್ತಿದೆ ಎಂಬ ಬರಹಗಳನ್ನು ನಾನು ಸಾಮಾಜಿಕ ಜಾಲತಾಣಗಳಲ್ಲಿ ಕಂಡಿದ್ದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟವನ್ನು ಸರ್ಕಾರ ನಿಲ್ಲಿಸಬೇಕು ಎಂಬ ಅರ್ಥವನ್ನು ಅವು ಧ್ವನಿಸುತ್ತಿದ್ದವು. 2003ಕ್ಕಿಂತ ಮೊದಲು ತಯಾರಾದ ವಾಹನಗಳಲ್ಲಿ ಮಾತ್ರ ಒಂದಿಷ್ಟು ಸಮಸ್ಯೆಗಳು ಕಂಡಿದ್ದವು' ಎಂದು ಪುರಿ ಹೇಳಿದ್ದಾರೆ.
ದೇಶದಲ್ಲಿ ಪ್ರತಿನಿತ್ಯ ಆರು ಕೋಟಿ ವಾಹನಗಳು ಪೆಟ್ರೋಲ್ ಬಂಕ್‌ಗಳಿಗೆ ಹೋಗುತ್ತವೆ. ಇ20 ಇಂಧನದಿಂದಾಗಿ ಎಂಜಿನ್‌ಗೆ ಹಾನಿ ಆಗುತ್ತಿದ್ದರೆ ಅಂತಹ ವಾಹನಗಳು ಈಗ ಎಲ್ಲೆಡೆಯೂ ಕಾಣಬೇಕಿತ್ತು ಎಂದು ಪುರಿ ಹೇಳಿದ್ದಾರೆ.



