ಕೂಡ್ಲು ಶ್ರೀಸ್ಕಂದ ಯಕ್ಷಗಾನ ಕೇಂದ್ರದ ದ್ವಿತೀಯ ವಾರ್ಷಿಕೋತ್ಸವ ಉದ್ಘಾಟನೆ
ಕಾಸರಗೋಡು: ಪುರಾಣ ಕಥೆಗಳು ಹಾಗೂ ಐತಿಹಾಸಿಕ ವಿಚಾರಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಶ್ರೇಷ್ಠ ಕಲಾಪ್ರಕಾರಗಳಲ್ಲಿ ಯಕ್ಷಗಾನ ಮುಂಚೂಣಿಯಲ್ಲಿದೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಕೂಡ್ಲು ಪಾಯಿಚ್ಚಾಲಿನ ಶ್ರೀಸ್ಕಂದ ಯಕ್ಷಗಾನ ಕೇಂದ್ರದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಯಕ್ಷಗಾನವನ್ನು ಶಾಸ್ತ್ರೀಯವಾಗಿ ಕಲಿತು ಇದೀಗ 14 ಮಕ್ಕಳು ಪ್ರಮಾಣಪತ್ರ ಪಡೆಯುತ್ತಿರುವುದು ಸಂತೋಷದ ಸಂಗತಿ. ಯುವಜನರನ್ನು ಯಕ್ಷಗಾನ ಕ್ಷೇತ್ರಕ್ಕೆ ಕರೆತಂದು ಅವರಿಗೆ ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಅರಿವು ಮೂಡಿಸುತ್ತಿರುವ ಶ್ರೀಸ್ಕಂದ ಯಕ್ಷಗಾನ ಕೇಂದ್ರದ ಸಾಧನೆ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
14 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ
ಯಕ್ಷಗಾನ ತರಬೇತಿಯನ್ನು ಪೂರ್ಣಗೊಳಿಸಿದ 14 ವಿದ್ಯಾರ್ಥಿಗಳಿಗೆ ಎಡನೀರು ಶ್ರೀಗಳು ಅವರ ಪೋಷಕರ ಸಮ್ಮುಖದಲ್ಲಿ ಶಾಲು ಹೊದಿಸಿ, ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ನಾಟ್ಯಗುರು ರಂಜಿತ್ ಗೋಳಿಯಡ್ಕ ಅವರು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು.
ಕೂಡ್ಲಿನ ಹಿರಿಯ ಯಕ್ಷಗಾನ ಹಿಮ್ಮೇಳ ಪರಿಕರಗಳ ತಯಾರಕ ವೆಂಕಟ್ರಮಣ ಅವರಿಗೆ ಶ್ರೀಸ್ಕಂದ ಯಕ್ಷಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶೇಷವನ ಕ್ಷೇತ್ರದ ಅರ್ಚಕ ಸುಬ್ರಾಯ ಕಾರಂತ, ಮಧೂರು ಕ್ಷೇತ್ರದ ನಿವೃತ್ತ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ಪತ್ರಕರ್ತ ರಂಜಿತ್ ಮಣಿಪ್ಪಾಡಿ, ಹಿರಿಯ ಯಕ್ಷಗಾನ ಭಾಗವತರಾದ ತಲ್ಪನಾಜೆ ವೆಂಕಟ್ರಮಣ ಭಟ್ ಹಾಗೂ ಶೇಷವನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಉದಯಕುಮಾರ್ ಕುಮಾರಧಾರ ಉಪಸ್ಥಿತರಿದ್ದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಪ್ರಣೀತ್, ಪ್ರತೀಕ್, ಧನ್ವಿನ್ ಹಾಗೂ ಗೌರವ್ ಅವರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಕೇಂದ್ರದ ಅಧ್ಯಕ್ಷ ಕಿರಣ್ ಪ್ರಸಾದ್ ಕೂಡ್ಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಶೋಕ್ ಕುಮಾರ್ ಆಚಾರ್ಯ ಸ್ವಾಗತಿಸಿದರು. ಕೇಂದ್ರದ ಸಂಚಾಲಕ ಮುರಳೀಧರ ಶೆಟ್ಟಿ ವಂದಿಸಿದರು.
ಕೇಂದ್ರದ ರಕ್ಷಕರಾದ ಗೋಪಾಲ ಪಾಯಿಚ್ಚಾಲು, ಭುವನೇಶ್ ಆಚಾರ್ಯ, ಕಿರಣ್ ಕುಮಾರ್ ಪಾಯಿಚ್ಚಾಲು, ಚಂದ್ರಶೇಖರ, ಉದಯಕುಮಾರ್ ಸಿ.ಎ., ಮಂಜುನಾಥ ಬಲ್ಯಾಯ ಹಾಗೂ ಶರತ್ ಕುಮಾರ್ ಸಹಕರಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನದ ವೈಭವವನ್ನು ಸಾರುವ ಕೇಂದ್ರದ ವಿದ್ಯಾರ್ಥಿಗಳಿಂದ ‘ಸುಂದೋಪಸುಂದ ಕಾಳಗ – ಶಶಿಪ್ರಭಾ ಪರಿಣಯ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.



