ನವದೆಹಲಿ: ಜಾಗತಿಕ ವ್ಯಾಪಾರ ಮತ್ತು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಆರ್ಥಿಕ ಹಿತಾಸಕ್ತಿಗಳ ದೃಷ್ಟಿಯಿಂದ ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ಆದಷ್ಟು ಶೀಘ್ರವೇ ಅಂತಿಮಗೊಳ್ಳಲಿದೆ ಎಂಬ ವಿಶ್ವಾಸವನ್ನು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ವ್ಯಕ್ತಪಡಿಸಿದ್ದಾರೆ.
ಅವರು ಬ್ಯಾಂಕಾಕ್‌ನಲ್ಲಿ ಐಎಂಎಫ್-ವಿಶ್ವಬ್ಯಾಂಕ್ ವಾರ್ಷಿಕ ಸಭೆಯ ನೇಪಥ್ಯದಲ್ಲಿ ಅಟ್ಲಾಂಟಿಕ್ ಕೌನ್ಸಿಲ್ ಜೊತೆ ಸಂವಾದದಲ್ಲಿ ಮಾತನಾಡುತ್ತಿದ್ದರು.
ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಕೂಡ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಮೊದಲ ಹಂತವು ಅಂತಿಮಗೊಂಡಿದ್ದು, ಪ್ರಸ್ತುತ ಕಾನೂನು ಚೌಕಟ್ಟಿನ ಕರಡು ಸಿದ್ಧಪಡಿಸಲಾಗುತ್ತಿದೆ ಎಂದು ಗುರುವಾರ ತಿಳಿಸಿದ್ದರು.
ಚೀನಾದೊಂದಿಗೆ ವ್ಯಾಪಾರದ ಕುರಿತು ಸೀತಾರಾಮನ್, ಬೀಜಿಂಗ್ ಜತೆ ನಿರಂತರ ಮಾತುಕತೆ ನಡೆಸುತ್ತಿದ್ದರೂ ಹೆಚ್ಚುತ್ತಿರುವ ವ್ಯಾಪಾರ ಅಸಮತೋಲನ ಮತ್ತು ಭಾರತೀಯ ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶದ ಮೇಲಿನ ನಿರ್ಬಂಧಗಳು ಪ್ರಮುಖ ಕಳವಳಗಳಾಗಿ ಉಳಿದಿವೆ ಎಂದು ಹೇಳಿದರು.
ಜೆನೆರಿಕ್ ಔಷಧಿಗಳು, ಬೀಫ್, ತರಕಾರಿಗಳು ಮತ್ತು ಇತರ ಬೇಗ ಹಾಳಾಗುವ ಸರಕುಗಳಿಗೆ ಚೀನಾದಲ್ಲಿ ಮಾರುಕಟ್ಟೆ ಪ್ರವೇಶವನ್ನು ಭಾರತ ನಿರಂತರವಾಗಿ ಕೋರಿದೆ. ಆದರೆ ವರ್ಷಗಳ ಚರ್ಚೆಯ ನಂತರವೂ ಯಾವುದೇ ಮಹತ್ವದ ಪ್ರಗತಿಯಾಗಿಲ್ಲ ಎಂದರು.
ಸುಂಕೇತರ ಅಡೆತಡೆಗಳು ಭಾರತ ಮತ್ತು ಚೀನಾ ನಡುವಿನ ವ್ಯಾಪಾರದಲ್ಲಿ ದೊಡ್ಡ ಸವಾಲಾಗಿವೆ ಎಂದು ಹೇಳಿದ ಸೀತಾರಾಮನ್, ಬೃಹತ್ ವ್ಯಾಪಾರ ಅಸಮತೋಲನವನ್ನು ಸರಿಪಡಿಸಲು ಭಾರತವು ದಂಡನಾತ್ಮಕ ಸುಂಕಗಳನ್ನು ವಿಧಿಸುವ ಮಾರ್ಗವನ್ನು ಅನುಸರಿಸಿಲ್ಲ, ಬದಲಿಗೆ ನಿಧಾನವಾದರೂ ಮಾತುಕತೆಗಳ ಮೂಲಕವೇ ಪರಿಹಾರ ಕಂಡುಕೊಳ್ಳಲು ಆದ್ಯತೆ ನೀಡಿದೆ ಎಂದು ಸ್ಪಷ್ಟಪಡಿಸಿದರು.
ಬ್ರಿಕ್ಸ್ ಕುರಿತಂತೆ ಸೀತಾರಾಮನ್, ಈ ಒಕ್ಕೂಟವನ್ನು ಯಾವುದೇ ದೇಶ ಅಥವಾ ಬಣವನ್ನು ಎದುರಿಸುವ ವೇದಿಕೆಯಾಗಿ ನೋಡದೇ ಜನರ ಕಲ್ಯಾಣಕ್ಕಾಗಿ ರೂಪಿಸಲಾದ ಪಾಲುದಾರಿಕೆಯಾಗಿ ನೋಡಬೇಕು ಎಂದರು.
ಬ್ರಿಕ್ಸ್ ಒಕ್ಕೂಟವು ವಿಶ್ವದ ಜನಸಂಖ್ಯೆಯ ಸುಮಾರು ಶೇ.40ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ ಎಂದು ಬೆಟ್ಟು ಮಾಡಿದ ಅವರು, ಬ್ರಿಕ್ಸ್ ಸದಸ್ಯ ದೇಶಗಳ ನಡುವೆ ಸಹಕಾರವು ವ್ಯಾಪಾರವನ್ನು ಸುಧಾರಿಸಲು, ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸಲು ಮತ್ತು ಆರ್ಥಿಕ ಅವಕಾಶಗಳನ್ನು ವಿಸ್ತರಿಸಲು ನೆರವಾಗುತ್ತದೆ ಎಂದರು.
ಭಾರತದ ಆರ್ಥಿಕ ಬೆಳವಣಿಗೆಯ ಕುರಿತಂತೆ ವಿತ್ತಸಚಿವೆ, ಜಾಗತಿಕ ವ್ಯತ್ಯಯಗಳ ನಡುವೆಯೂ ದೇಶವು ಬಲವಾದ ಬೆಳವಣಿಗೆಯನ್ನು ಕಾಯ್ದುಕೊಂಡಿದೆ. ಕೋವಿಡ್ ನಂತರ ಭಾರತವು ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಮೂಲಸೌಕರ್ಯಗಳ ಮೇಲಿನ ಸಾರ್ವಜನಿಕ ಹೂಡಿಕೆಯು ಉದ್ಯೋಗ ಸೃಷ್ಟಿಗೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಬೆಂಬಲ ನೀಡಿದೆ ಎಂದು ಹೇಳಿದರು.
ಸರಕಾರದ ಸಾಲಗಳು ಮೂಲಸೌಕರ್ಯಗಳ ವೆಚ್ಚದೊಂದಿಗೆ ತಳುಕು ಹಾಕಿಕೊಂಡಿವೆ ಎಂದ ಸೀತಾರಾಮನ್, ಸಾಲದ ನೆರವಿನಿಂದ ಆಸ್ತಿ ಸೃಷ್ಟಿಯು ಆರ್ಥಿಕತೆಗೆ ಪ್ರಯೋಜನವನ್ನು ನೀಡುತ್ತದೆ ಎಂದು ಪ್ರತಿಪಾದಿಸಿದರು.



