ಪ್ರತಿ ಬಜೆಟ್ನಲ್ಲಿ ವಿಶೇಷ ಆರ್ಥಿಕ ಪ್ಯಾಕೇಜ್ ಮೀಸಲಿಡಲು ಕರ್ನಾಟಕ ಸರ್ಕಾರಕ್ಕೆ ಆಗ್ರಹ
ಮಂಜೇಶ್ವರ: ಗಡಿನಾಡು ಮತ್ತು ಹೊರನಾಡು ಕನ್ನಡಿಗರನ್ನು ಒಳಗೊಂಡಂತೆ ಕರ್ನಾಟಕ ಸರ್ಕಾರ ಹೊಸ ಸಾಂಸ್ಕೃತಿಕ ನೀತಿಯನ್ನು ರೂಪಿಸಬೇಕು. ಎರಡೂ ವಿಭಾಗಗಳ ಕನ್ನಡಿಗರ ಅಭಿವೃದ್ಧಿಗಾಗಿ ಪ್ರತಿ ಬಜೆಟ್ನಲ್ಲೂ ವಿಶೇಷ ಆರ್ಥಿಕ ಪ್ಯಾಕೇಜ್ ಮೀಸಲಿಡಬೇಕು ಎಂದು ಹಿರಿಯ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಡಾ. ಬರಗೂರು ರಾಮಚಂದ್ರಪ್ಪ ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪುವೆಂಪು ಪ್ರತಿಷ್ಠಾನ, ಬದಿಯಡ್ಕದ ತುಳು ಭವನ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ಗಳ ಸಂಯುಕ್ತ ಆಶ್ರಯದಲ್ಲಿ ಮಂಜೇಶ್ವರದ ಗಿಳಿವಿಂಡು ಆವರಣದ ಪಾರ್ತಿಸುಬ್ಬ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ಬಹುಭಾಷಾ ವಿದ್ವಾಂಸ ಡಾ. ಪಿ. ವೆಂಕಟರಾಜ ಪುಣಿಂಚಿತ್ತಾಯ ಅವರ ‘ಪುವೆಂಪು ನೆನಪು 2026’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಭಾಷೆಯ ದೃಷ್ಟಿಯಿಂದ ಮಾತ್ರವಲ್ಲದೆ, ಭಾಷೆಯನ್ನು ಬಳಸುವ ಜನರ ದೃಷ್ಟಿಕೋನದಿಂದಲೂ ಚಿಂತಿಸಿದಾಗ ಇಂತಹ ನೀತಿಗಳನ್ನು ಪರಿಣಾಮಕಾರಿಯಾಗಿ ರೂಪಿಸಲು ಸಾಧ್ಯವಾಗುತ್ತದೆ. ಕನ್ನಡಿಗರನ್ನು ಉಳಿಸಿದರೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನೂ ಉಳಿಸಬಹುದು ಎಂಬ ವಿಶ್ವಾಸ ನನಗಿದೆ ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.
ದೇಶದ ಯಾವುದೇ ಭಾಗದಲ್ಲಿರುವ ಕನ್ನಡಿಗರಿಗೆ ಉದ್ಯೋಗ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಕರ್ನಾಟಕದ ಕನ್ನಡಿಗರಿಗೆ ದೊರೆಯುವ ಸೌಲಭ್ಯಗಳು ಲಭ್ಯವಾಗಬೇಕು. ಕನ್ನಡವು ಅನ್ನ ನೀಡುವ ಭಾಷೆಯಾಗಬೇಕು ಎಂದು ಅವರು ಪ್ರತಿಪಾದಿಸಿದರು.
ಬಹುತ್ವದ ಸೇತುವೆ ಕಾಸರಗೋಡು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್, ಬಹುಭಾಷೆ ಮತ್ತು ಬಹುಸಂಸ್ಕೃತಿಯ ಜನರು ನೆಲೆಸಿರುವ ಕಾಸರಗೋಡು ಪ್ರದೇಶದ ಜನರು ಬಹುತ್ವದ ಸೇತುವೆಯನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು.
ಕಾಸರಗೋಡಿನಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು. ಈ ಭಾಗದ ಜನರ ಬೆಂಬಲಕ್ಕೆ ಕರ್ನಾಟಕ ಸರ್ಕಾರ ಸದಾ ನಿಲ್ಲಲಿದೆ ಎಂದು ಅವರು ಭರವಸೆ ನೀಡಿದರು.
ತುಳು ಭಾಷೆ, ಸಾಹಿತ್ಯಕ್ಕೆ ಪುಣಿಂಚಿತ್ತಾಯರ ಅನನ್ಯ ಕೊಡುಗೆ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಡಾ. ಎಂ. ವೀರಪ್ಪ ಮೊಯ್ಲಿ ಮಾತನಾಡಿ, ಡಾ. ಪಿ. ವೆಂಕಟರಾಜ ಪುಣಿಂಚಿತ್ತಾಯರು ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ ಅಪರೂಪದ ಸಂಶೋಧಕರು ಎಂದು ಬಣ್ಣಿಸಿದರು.
ತುಳು ಲಿಪಿಯ ಪುನರುಜ್ಜೀವನ, ಪ್ರಾಚೀನ ಕೃತಿಗಳ ಶೋಧನೆ ಹಾಗೂ ಕನ್ನಡ ಮತ್ತು ತುಳು ಭಾಷೆಗಳ ನಡುವಿನ ಅವಿನಾಭಾವ ಸಂಬಂಧವನ್ನು ಜಗತ್ತಿಗೆ ಪರಿಚಯಿಸುವಲ್ಲಿ ಪುಣಿಂಚಿತ್ತಾಯರು ಸಲ್ಲಿಸಿದ ಸೇವೆ ಅನನ್ಯವಾಗಿದೆ ಎಂದು ಅವರು ಹೇಳಿದರು.
ಕನ್ನಡ ಮತ್ತು ತುಳು ಸಂಸ್ಕೃತಿಗಳು ಗಡಿನಾಡಿನಲ್ಲಿ ಪರಸ್ಪರ ಸಾಮರಸ್ಯದಿಂದ ಬೆರೆತು ಬದುಕುತ್ತಿವೆ. ಈ ಸೌಹಾರ್ದ ಪರಂಪರೆಯನ್ನು ಬಲಪಡಿಸುವಲ್ಲಿ ಪುಣಿಂಚಿತ್ತಾಯರಂತಹ ಮಹನೀಯರ ಸಮನ್ವಯದ ದೃಷ್ಟಿಕೋನ ಮಹತ್ವದ ಪಾತ್ರ ವಹಿಸಿದೆ ಎಂದು ಮೊಯ್ಲಿ ಅಭಿಪ್ರಾಯಪಟ್ಟರು.
ಕಾಸರಗೋಡು ಸಾಹಿತ್ಯ ಮತ್ತು ಸಂಸ್ಕೃತಿಯ ನೆಲೆಯಾಗಿದ್ದು, ಇಲ್ಲಿನ ಭಾಷಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಅಗತ್ಯವಿದೆ. ಪುಣಿಂಚಿತ್ತಾಯರ ಅಮೂಲ್ಯ ಸಂಶೋಧನಾ ಬರಹಗಳು ಮತ್ತು ಸಾಹಿತ್ಯಿಕ ಕೊಡುಗೆಗಳನ್ನು ಯುವಪೀಳಿಗೆಗೆ ಪರಿಚಯಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ, ಕವಿ ಕೆ. ರಾಧಾಕೃಷ್ಣ ಉಳಿಯತ್ತಡ್ಕ, ಕೇರಳ ಗಡಿನಾಡ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಗಡಿನಾಡು ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಎನ್. ಚನಿಯಪ್ಪ ನಾಯ್ಕ್, ಪದ್ಮಶ್ರೀ ಸತ್ಯನಾರಾಯಣ ಬೆಳ್ಳೇರಿ, ಓಂಕೃಷ್ಣ ಹಾಗೂ ಗ್ರಾಮ ಪಂಚಾಯಿತಿ ಸದಸ್ಯೆ ಹರಿಣಾಕ್ಷಿ ಹರಿಶ್ಚಂದ್ರ ಮಂಜೇಶ್ವರ ಉಪಸ್ಥಿತರಿದ್ದರು.
ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುವೆಂಪು ಪ್ರತಿಷ್ಠಾನದ ಅಧ್ಯಕ್ಷ ಕುಂಟಾರು ರವೀಶ ತಂತ್ರಿ ಸ್ವಾಗತಿಸಿದರು. ವ್ಯವಸ್ಥಾಪಕ ಟ್ರಸ್ಟಿ ವಿಜಯರಾಜ ಪುಣಿಂಚಿತ್ತಾಯ ವಂದಿಸಿದರು. ಪತ್ರಕರ್ತ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಂಜೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಶೀರ್ ಕನಿಲ ಉದ್ಘಾಟಿಸಿದರು. ಪುವೆಂಪು ವಿರಚಿತ ಹಾಡುಗಳ ನೃತ್ಯ ವೈಭವವನ್ನು ಸೂರಂಬೈಲಿನ ಕಣ್ಣಣಿ ತಂಡ ಪ್ರದರ್ಶಿಸಿತು. ಡಾ. ನಾಗೇಶ್ ಕೆ.ಎನ್. ಅವರ ನಿರ್ದೇಶನದಲ್ಲಿ ಕಲಾತಂಡದ ನೃತ್ಯ ಪ್ರದರ್ಶನ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪುಣಿಂಚಿತ್ತಾಯರು ಗಡಿನಾಡಿನ ಭಾಷಾ ಸಂಪತ್ತಿನ ರಕ್ಷಣೆಗೆ ನಿಂತ ಶಕ್ತಿ: ಡಾ. ಎಂ. ವೀರಪ್ಪ ಮೊಯ್ಲಿ
ಕಾಸರಗೋಡು: ಡಾ. ಪಿ. ವೆಂಕಟರಾಜ ಪುಣಿಂಚಿತ್ತಾಯರು ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ ಅಪರೂಪದ ಸಂಶೋಧಕರು ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಡಾ. ಎಂ. ವೀರಪ್ಪ ಮೊಯ್ಲಿ ಹೇಳಿದರು.
ಮಂಜೇಶ್ವರದ ಗಿಳಿವಿಂಡು ಆವರಣದ ಪಾರ್ತಿಸುಬ್ಬ ವೇದಿಕೆಯಲ್ಲಿ ನಡೆದ ‘ಪುವೆಂಪು ನೆನಪು 2026’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಣಿಂಚಿತ್ತಾಯರ ಸಾಹಿತ್ಯಿಕ ಸಾಧನೆ ಹಾಗೂ ಗಡಿನಾಡಿನ ಭಾಷಿಕ ಅಸ್ಮಿತೆಯ ಮಹತ್ವವನ್ನು ಸ್ಮರಿಸಿದರು.
ತುಳು ಲಿಪಿಯ ಪುನರುಜ್ಜೀವನ, ಪ್ರಾಚೀನ ಕೃತಿಗಳ ಶೋಧನೆ ಹಾಗೂ ಕನ್ನಡ ಮತ್ತು ತುಳು ಭಾಷೆಗಳ ನಡುವಿನ ಅವಿನಾಭಾವ ಸಂಬಂಧವನ್ನು ಜಗತ್ತಿಗೆ ಪರಿಚಯಿಸುವಲ್ಲಿ ಪುಣಿಂಚಿತ್ತಾಯರು ಸಲ್ಲಿಸಿದ ಸೇವೆ ಅನನ್ಯವಾಗಿದೆ ಎಂದು ಹೇಳಿದರು.
ಕನ್ನಡ ಮತ್ತು ತುಳು ಸಂಸ್ಕೃತಿಗಳು ಗಡಿನಾಡಿನಲ್ಲಿ ಪರಸ್ಪರ ಸಾಮರಸ್ಯದಿಂದ ಬೆರೆತು ಬದುಕುತ್ತಿವೆ. ಈ ಸಾಂಸ್ಕೃತಿಕ ಸಮನ್ವಯವನ್ನು ಬಲಪಡಿಸುವಲ್ಲಿ ಪುಣಿಂಚಿತ್ತಾಯರಂತಹ ಮಹನೀಯರ ಕೊಡುಗೆ ಮಹತ್ವದ್ದಾಗಿದೆ ಎಂದು ಮೊಯ್ಲಿ ಅಭಿಪ್ರಾಯಪಟ್ಟರು.
ಕಾಸರಗೋಡು ಸಾಹಿತ್ಯ ಮತ್ತು ಸಂಸ್ಕೃತಿಯ ನೆಲೆಯಾಗಿದ್ದು, ಇಲ್ಲಿನ ಭಾಷಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾಗಿದೆ. ಪುಣಿಂಚಿತ್ತಾಯರ ಅಮೂಲ್ಯ ಸಂಶೋಧನಾ ಬರಹಗಳು ಹಾಗೂ ಸಾಹಿತ್ಯಿಕ ಕೊಡುಗೆಗಳನ್ನು ಯುವಪೀಳಿಗೆಗೆ ಪರಿಚಯಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

.jpg)
.jpg)
.jpg)
