ರಿಯಾದ್: ಇರಾನ್ ಬೆಂಬಲಿತ ಹೂಥಿ ಬಂಡುಕೋರರು ಹಾರಿಸಿದ ಎರಡು ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ಸೌದಿ ಅರೇಬಿಯಾ ಹೇಳಿದೆ.
ಸೌದಿ ಅರೇಬಿಯಾ ರಾಜಧಾನಿ ರಿಯಾದ್‌ನ ಪಶ್ಚಿಮ ಭಾಗದಲ್ಲಿರುವ ನಗರಗಳಾದ ತಾಯಿಫ್ ಹಾಗೂ ಯಾನ್ಬು ಮೇಲೆ ಕ್ಷಿಪಣಿಗಳನ್ನು ಹಾರಿಸಲಾಗಿತ್ತು ಎಂದು ಯೆಮನ್‌ನಲ್ಲಿ ಹೋರಾಡುತ್ತಿರುವ ಸೌದಿ ನೇತೃತ್ವದ ಮೈತ್ರಿ ಸೇನೆಯು ತಿಳಿಸಿದೆ.
ಇದಕ್ಕೂ ಮುನ್ನ ರಿಯಾದ್‌ನ ನಾಗರಿಕ ರಕ್ಷಣಾ ಸಂಸ್ಥೆಯು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜನರಿಗೆ ಸೂಚಿಸಿತ್ತು. ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ಸಂಬಂಧಿಸಿದ ಚಿತ್ರ ಅಥವಾ ಮಾಹಿತಿಯನ್ನು ಹಂಚಿಕೊಳ್ಳುವುದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಿತ್ತು.
ಸೌದಿ ದಾಳಿ- ಮೂವರು ಸಾವು (ಸನಾ ವರದಿ): ಯೆಮನ್ ರಾಜಧಾನಿ ಸನಾ ಮೇಲೆ ಸೌದಿ ಅರೇಬಿಯಾ ನಡೆಸಿದ ವೈಮಾನಿಕ ದಾಳಿಯಿಂದ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಹೂಥಿ ನಿಯಂತ್ರಿತ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.



