ನವದೆಹಲಿ: ಉಕ್ರೇನ್‌ನಲ್ಲಿರುವ ಭಾರತದ ಕುಸುಮ್ ಗ್ರೂಪ್‌ಗೆ ಸೇರಿದ ಬೃಹತ್ ಫಾರ್ಮಾ ಘಟಕದ ಮೇಲೆ ರಷ್ಯಾ ಡ್ರೋನ್ ದಾಳಿ ನಡೆಸಿದ್ದು, ಒಬ್ಬ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಎನ್‌ಡಿಟಿವಿ ವರದಿ ತಿಳಿಸಿದೆ.
ಉಕ್ರೇನ್‌ನ ಸುಮಿ ಪ್ರದೇಶದಲ್ಲಿರುವ ಫಾರ್ಮಾ ಘಟಕದ ಮುಖ್ಯ ಕಟ್ಟಡ ಸಂಪೂರ್ಣ ನಾಶವಾಗಿದ್ದು, ಸಾವು ಮತ್ತು ಗಾಯಾಳುಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಅಪ್ಪಳಿಸಿರುವ ಘಟಕದಲ್ಲಿ ಭಾರಿ ಪ್ರಮಾಣದ ಹೊಗೆಯು ದೃಶ್ಯಗಳಲ್ಲಿ ಕಂಡುಬಂದಿದೆ.
1994ರಲ್ಲಿ ಕುಸುಮ್ ಸಮೂಹವು ಉಕ್ರೇನ್‌ಗೆ ಭಾರತದ ಔಷಧಿಗಳನ್ನು ರಫ್ತು ಮಾಡುವ ವಿತರಕ ಸಂಸ್ಥೆಯಾಗಿ ಕಾರ್ಯಾಚರಣೆ ಆರಂಭಿಸಿತ್ತು. 2002ರಲ್ಲಿ ಇತರ ಕಂಪನಿಗಳ ಉತ್ಪನ್ನ ವಿತರಣೆ ನಿಲ್ಲಿಸಿದ ಸಂಸ್ಥೆಯು, ತನ್ನದೇ ಆದ ಬ್ರಾಂಡ್‌ಗಳನ್ನು ಪರಿಚಯಿಸಿತ್ತು. ಬಳಿಕ, ಉತ್ಪಾದನಾ ವಲಯಕ್ಕೂ ಪ್ರವೇಶಿಸಿತ್ತು. 2007ರಲ್ಲಿ ಭಾರತದಲ್ಲಿ ಮತ್ತು 2009ರಲ್ಲಿ ಉಕ್ರೇನ್‌ನ ಸುಮಿ ನಗರದಲ್ಲಿ ಉತ್ಪಾದನಾ ಘಟಕ ಆರಂಭಿಸಿತ್ತು.
ಫಾರ್ಮಾ ಘಟಕದ ಮೇಲೆ ರಷ್ಯಾ ದಾಳಿ ಬಗ್ಗೆ ಎಕ್ಸ್ ಪೋಸ್ಟ್‌ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮಾಹಿತಿ ಹಂಚಿಕೊಂಡಿದ್ದಾರೆ.
'ರಷ್ಯಾ ಇಂದು ಬೆಳಿಗ್ಗೆ ಮತ್ತೆ ಕೀವ್‌ನ ಪಿವ್ನುಚ್ನಿ ಸೇತುವೆ ಮೇಲೆ ದಾಳಿ ಮಾಡಿದೆ. ಸುಮಿಯ ಔಷಧ ಗೋದಾಮಿನ ಮೇಲೂ ಡ್ರೋನ್ ದಾಳಿ ನಡೆಸಿದ್ದಾರೆ. ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ನನ್ನ ಸಂತಾಪಗಳು' ಎಂದು ತಿಳಿಸಿದ್ದಾರೆ.
ಹಲವು ವರ್ಷಗಳಿಂದ ರಷ್ಯಾ-ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು, ಈ ಫಾರ್ಮಾ ಘಟಕ ಕಾರ್ಯಾಚರಣೆ ನಿಲ್ಲಿಸಿರಲಿಲ್ಲ. ಈಗ ಭಾರಿ ಹಾನಿಯಾದಂತೆ ತೋರುತ್ತಿದ್ದು, ₹400 ಕೋಟಿ ನಷ್ಟದ ಅಂದಾಜು ಮಾಡಲಾಗಿದೆ.

