ನವದೆಹಲಿ: ದೇಶದ ಎಲ್ಲ ಶಾಸನಸಭೆಗಳಿಗೆ ಅನ್ವಯವಾಗುವಂತೆ ಏಕರೂಪ ಮಾದರಿ ಕಾರ್ಯವಿಧಾನ ಮತ್ತು ಕಾರ್ಯಕಲಾಪ ನಿರ್ವಹಣಾ ನಿಯಮಗಳನ್ನು ರೂಪಿಸಲು ಲೋಕಸಭಾಧ್ಯಕ್ಷರು, ಆರು ಸಭಾಧ್ಯಕ್ಷರ ಸಮಿತಿಯ ಮಹತ್ವದ ಸಭೆ ಮಂಗಳವಾರ ಇಲ್ಲಿ ನಡೆಯಿತು.
ದೆಹಲಿ ವಿಧಾನಸಭೆಯು ಸಭೆಯ ಆತಿಥ್ಯ ವಹಿಸಿತ್ತು. ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಅವರು ಸಮಿತಿಯ ಸದಸ್ಯರಾಗಿ ಭಾಗವಹಿಸಿ ರಾಜ್ಯವನ್ನು ಪ್ರತಿನಿಧಿಸಿದರು.
ಸದನದ ಕಲಾಪಗಳನ್ನು ಸುಗಮ, ಪಾರದರ್ಶಕ ಮತ್ತು ಶಿಸ್ತುಬದ್ಧವಾಗಿ ನಡೆಸುವ ವಿಧಾನಗಳು, ಪ್ರಶ್ನೋತ್ತರ ಅವಧಿ ಮತ್ತು ಶೂನ್ಯ ವೇಳೆಯನ್ನು ಹೆಚ್ಚು ಫಲಪ್ರದಗೊಳಿಸುವುದು, ಸದನದ ಘನತೆ ಮತ್ತು ಸದಸ್ಯರ ನಡವಳಿಕೆ ಕುರಿತ ಏಕರೂಪ ಮಾನದಂಡಗಳು, ಡಿಜಿಟಲ್ ಹಾಗೂ ಕಾಗದರಹಿತ ಕಲಾಪಗಳಿಗೆ ತಂತ್ರಜ್ಞಾನದ ಬಳಕೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಕರ್ನಾಟಕ ಶಾಸನ ಸಭೆಯಲ್ಲಿ ಅನುಸರಿಸಲಾಗುತ್ತಿರುವ ಉತ್ತಮ ಕಾರ್ಯಪದ್ಧತಿಗಳನ್ನು ಜಿ.ಎಸ್. ಪಾಟೀಲ ಅವರು ಸಮಿತಿಯ ಗಮನಕ್ಕೆ ತಂದರು. ಏಕರೂಪ ನಿಯಮಗಳನ್ನು ರೂಪಿಸುವಾಗ ಪ್ರತಿ ರಾಜ್ಯದ ವಿಶಿಷ್ಟ ಸಂಪ್ರದಾಯಗಳನ್ನೂ ಗೌರವಿಸಬೇಕು ಎಂದು ಸಲಹೆ ನೀಡಿದರು.
ಸದಸ್ಯರು ನೀಡಿದ ಸಲಹೆಗಳನ್ನು ಕ್ರೋಡೀಕರಿಸಿ, ಮುಂದಿನ ಸಭೆಗಳಲ್ಲಿ ಕರಡು ನಿಯಮಾವಳಿಯನ್ನು ಅಂತಿಮಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.



