HEALTH TIPS

ಆಗಮ ಶಾಸ್ತ್ರದಡಿಯ ದೇಗುಲಗಳಿಗೆ ಅನ್ಯಧರ್ಮಿಯರ ಪ್ರವೇಶ: ಮದ್ರಾಸ್ ಹೈಕೋರ್ಟ್ ಷರತ್ತು

ಚೆನ್ನೈ: ದೇವರ ಮೇಲಿನ ನಂಬಿಕೆ ದೃಢಪಡಿಸಲು ಅಥವಾ ಸಾಂಪ್ರದಾಯಿಕ ಆಚರಣೆಗಳನ್ನು ಪಾಲಿಸಲು ನಿರಾಕರಿಸುವ ಅನ್ಯಧರ್ಮಿಯರಿಗೆ ಆಗಮ ಶಾಸ್ತ್ರಗಳ ನಿಯಮಗಳಡಿ ನಿರ್ವಹಿಸಲ್ಪಡುವ ದೇವಾಲಯಗಳಿಗೆ ಪ್ರವೇಶ ನಿರ್ಬಂಧಿಸಬಹುದು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.


ಅಂತಹವರಿಗೆ ಆಗಮ ಶಾಸ್ತ್ರದ ದೇಗುಲ ಪ್ರವೇಶಕ್ಕೆ ಅನುಮತಿ ನೀಡಿದರೆ, ಧಾರ್ಮಿಕ ಪಾವಿತ್ರ್ಯತೆಯಲ್ಲಿ ರಾಜಿಮಾಡಿಕೊಂಡಂತಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. 

ಈ ತೀರ್ಪು ಎಲ್ಲ ದೇವಾಲಯಗಳಿಗೂ ಅನ್ವಯಿಸುವುದಿಲ್ಲ, ಆಗಮ ಶಾಸ್ತ್ರದ ಪ್ರಕಾರ ನಡೆಯುವ ದೇವಾಲಯಗಳಿಗೆ ಮಾತ್ರ ಸೀಮಿತವಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ತಮಿಳುನಾಡು ದೇವಾಲಯ ಪ್ರವೇಶ ಅಧಿಕಾರ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕಾನೂನು ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಕೆ. ತಂಗಮ್ ವೆಂಕಟೇಶ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ಪಿ. ಮುರುಗನ್ ಅವರ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಆಗಮ ಶಾಸ್ತ್ರದ ಪ್ರಕಾರ, ಈ ದೇವಾಲಯಗಳನ್ನು ನಿರ್ಮಿಸಲಾಗಿದ್ದು, ಅದರ ನಿಯಮಗಳಡಿ ನಡೆಸಲಾಗುತ್ತಿದೆ ಎಂದು ಪೀಠ ಹೇಳಿದೆ.

ಅನ್ಯ ಧರ್ಮಗಳ ಜನರು ಆಗಮ ಶಾಸ್ತ್ರದ ದೇವಾಲಯಗಳಿಗೆ ಪ್ರವೇಶಿಸುವ ಕುರಿತು ಪ್ರತಿಕ್ರಿಯಿಸಿದ ಪೀಠವು, ರಾಜಕೀಯ ವ್ಯಕ್ತಿಗಳು ವ್ಯತಿರಿಕ್ತ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಹೇಳಿತು.

ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಕ್ರೈಸ್ತ ಧರ್ಮಕ್ಕೆ ಸೇರಿದವರಾಗಿದ್ದು, ದೇವರ ಮೇಲೆ ನಂಬಿಕೆ ಕುರಿತಂತೆ ಕಡ್ಡಾಯ ಲಿಖಿತ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ ನಂತರ ಅವರು ಮಧುರೈ ಮೀನಾಕ್ಷಿ ಅಮ್ಮನ್ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ ಎಂದು ಹೇಳಿದೆ.

'ವಿಜಯ್ ಕ್ರೈಸ್ತ ಧರ್ಮಕ್ಕೆ ಸೇರಿದ್ದು, ದೇಗುಲ ಪ್ರವೇಶಿಸಲು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಕೇಳಿಲ್ಲ. ಬದಲಾಗಿ, ದೇವರ ಮೇಲಿನ ತಮ್ಮ ಭಕ್ತಿಯನ್ನು ದೃಢೀಕರಿಸಲು ಮಾತ್ರ ಕೇಳಲಾಗಿದೆ. ಇದನ್ನು ನಾವು ಎಲ್ಲರನ್ನೂ ಒಳಗೊಳ್ಳುವ ವಿಧಾನ ಎಂದು ಕರೆಯುತ್ತೇವೆ'ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ರಾಜಕೀಯ ಉದ್ದೇಶಗಳಿಗಾಗಿ ಹಣೆ ಮೇಲೆ ಕುಂಕುಮ ಇಟ್ಟು ದೇಗುಲಕ್ಕೆ ಭೇಟಿ ನೀಡುವವರನ್ನು ಟೀಕಿಸಿದ ಪೀಠ, ಅಂತಹವರಿಗಾಗಿ ದೇಗುಲದ ನಿಯಮಗಳನ್ನು ಬಲಿಕೊಡಲಾಗದು ಎಂದಿದೆ.

ಕುಂಭಾಭಿಷೇಕದ ವೇಳೆ, ತಯಾರಿ ಪರಿಶೀಲಿಸುವ ನೆಪದಲ್ಲಿ ಟಿವಿಕೆ ಶಾಸಕ ಬದ್ರುದ್ದೀನ್ ಮುಸ್ತಫಾ ಅವರು ದೇವಾಲಯದ ಗೋಪುರಗಳ ಮೇಲೆ ಹತ್ತಿದ್ದನ್ನು ಟೀಕಿಸಿದ ನ್ಯಾಯಪೀಠ, ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳುವ ಒಬ್ಬ ನಾಯಕ, ಧಾರ್ಮಿಕ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ದೇವಾಲಯದ ಗೋಪುರಗಳ ಮೇಲೆ ಹತ್ತಿದ್ದು ಅವರ ನಡವಳಿಕೆಯ ವೈರುಧ್ಯವಾಗಿದೆ ಎಂದು ಟೀಕಿಸಿತು.

ಇದೇವೇಳೆ, ದೇವಾಲಯದ ಪ್ರವೇಶ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ದೇವಾಲಯದ ಆಡಳಿತ ಮಂಡಳಿಗೆ ಆದೇಶಿಸಿದ ನ್ಯಾಯಪೀಠ, ರಾಜಕೀಯ ವ್ಯಕ್ತಿಗಳಿಗೆ ತಲೆಬಾಗದೆ, ಪ್ರಾಚೀನ ಸಂಪ್ರದಾಯಗಳನ್ನು ಪಾಲಿಸುವಂತೆ ಆದೇಶಿಸಿದೆ.

ದೇವರ ಮೇಲೆ ನಂಬಿಕೆ, ಶ್ರದ್ಧೆ ದೃಢಪಡಿಸಿ, ನಿಯಮಗಳ ಪಾಲನೆ ಮಾಡಿದರೆ ಮಾತ್ರ ಅನ್ಯಧರ್ಮಿಯರು ಆಗಮ ಶಾಸ್ತ್ರದಡಿ ನಡೆಯುವ ದೇಗುಲಕ್ಕೆ ಪ್ರವೇಶಿಸಬಹುದು ಎಂದು ನ್ಯಾಯಾಲಯ ಹೇಳಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries