ಹೇಗ್: ಭಾರತ ಮತ್ತು ಐರೋಪ್ಯ ಒಕ್ಕೂಟದ (ಇಯು) ನಡುವೆ 'ಹೂಡಿಕೆ ಸಂರಕ್ಷಣಾ ಒಪ್ಪಂದ' (ಐಪಿಎ) ಕುರಿತ ಮಾತುಕತೆ ಪ್ರಗತಿಯಲ್ಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಮಂಗಳವಾರ ತಿಳಿಸಿದರು.
ಐರೋಪ್ಯ ಒಕ್ಕೂಟದ ಜತೆಗೆ 'ಭೌಗೋಳಿಕ ಸೂಚಕಗಳ' (ಜಿಐ) ಕುರಿತ ಒಪ್ಪಂದಕ್ಕೆ ಕೆಲ ಕಾನೂನು ಬದಲಾವಣೆಗಳ ಅಗತ್ಯವಿದ್ದು, ಅವುಗಳನ್ನು ಸಂಸತ್ತಿನಲ್ಲಿ ಮಂಡಿಸಲು ಸಚಿವಾಲಯ ಸಿದ್ಧತೆ ನಡೆಸುತ್ತಿದೆ ಎಂದು ಅವರು ಸುದ್ದಿಗಾರರಿಗೆ ಹೇಳಿದರು.
ಭಾರತ ಮತ್ತು 27 ರಾಷ್ಟ್ರದ ಐರೋಪ್ಯ ಒಕ್ಕೂಟವು ಜನವರಿ 27ರಂದು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆಗಳು ಪೂರ್ಣಗೊಂಡಿವೆ ಎಂದು ಘೋಷಿಸಿದ್ದವು.
ಮುಕ್ತ ವ್ಯಾಪಾರ ಒಪ್ಪಂದ ಜಾರಿ ಬಳಿಕ ಈ ಒಪ್ಪಂದಗಳು ಕಾರ್ಯರೂಪಕ್ಕೆ ಬರುತ್ತವೆ ಎಂದು ಗೋಯಲ್ ಪ್ರತಿಕ್ರಿಯಿಸಿದರು.



