ಕಠ್ಮಂಡು: ಗಡಿಯಲ್ಲಿ ಭದ್ರತೆ ಮತ್ತು ಅಪರಾಧ ಚಟುವಟಿಕೆಗಳ ನಿಯಂತ್ರಣದ ಬಗ್ಗೆ ನೇಪಾಳ ಮತ್ತು ಭಾರತದ ಅರೆಸೇನಾ ಪಡೆಗಳ ಮುಖ್ಯಸ್ಥರು ಬುಧವಾರ ಮತ್ತು ಗುರುವಾರ ಇಲ್ಲಿ ಭೇಟಿಯಾಗಿ ಚರ್ಚಿಸಲಿದ್ದಾರೆ.
'ನೇಪಾಳದ ಎಪಿಎಫ್ ಮುಖ್ಯಸ್ಥ ನಾರಾಯಣದತ್ತ ಪೊಂಡ್ಯಾಲ್ ಮತ್ತು ಭಾರತದ ಸಶಸ್ತ್ರ ಸೀಮಾಬಲದ (ಎಸ್‌ಎಸ್‌ಬಿ) ಮಹಾನಿರ್ದೇಶಕ ಸಂಜಯ್ ಸಿಂಘಾಲ್ ನೇತೃತ್ವದಲ್ಲಿ 10ನೇ ವಾರ್ಷಿಕ ಸಹಕಾರ ಸಭೆ ನಡೆಯಲಿದೆ' ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
'ಗಡಿಯಲ್ಲಿ ಮೂರನೇ ರಾಷ್ಟ್ರದ ನಾಗರಿಕರ ಚಲನವಲನ, ಗಡಿ ಗಸ್ತು, ಗಡಿಯಲ್ಲಿ ಸಹಕಾರ, ಮಾನವ ಕಳ್ಳಸಾಗಣೆ, ಹಿಂದಿನ ಒಪ್ಪಂದಗಳ ಪರಿಶೀಲನೆ ಸೇರಿ ಹಲವು ವಿಚಾರಗಳು ಚರ್ಚೆಗೆ ಬರಲಿವೆ' ಎಂದು ಹೇಳಿದ್ದಾರೆ.
ನೇಪಾಳ ಮತ್ತು ಭಾರತ 1,750 ಕಿಲೋಮೀಟರ್ ಗಡಿಯನ್ನು ಹಂಚಿಕೊಂಡಿವೆ.



