ನವದೆಹಲಿ: ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಹಾಗೂ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ವಿರುದ್ಧ ದೇಶದಾದ್ಯಂತ ಸರಣಿ ಪ್ರತಿಭಟನೆ ಹಮ್ಮಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.
ಈ ಹೋರಾಟದ ಅಂಗವಾಗಿ, ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಿರುವ ಬರೋಬ್ಬರಿ 13.3 ಕೋಟಿಗೂ ಹೆಚ್ಚು ಜನರನ್ನು ತಲುಪಲು 'ವೋಟ್ ರಕ್ಷಕ' ಎಂಬ ಕಾರ್ಯಕರ್ತರ ಪಡೆಯನ್ನು ನಿಯೋಜಿಸುವುದಾಗಿ ಪಕ್ಷವು ಹೇಳಿದೆ.
ಇಲ್ಲಿನ ಇಂದಿರಾ ಭವನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿಗಳು ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಅಧ್ಯಕ್ಷರ ಉನ್ನತ ಮಟ್ಟದ ಸಭೆಯಲ್ಲಿ 'ವೋಟ್ ಬಚಾವೋ, ದೇಶ್ ಬಚಾವೋ' ಅಭಿಯಾನಕ್ಕೆ ಚಾಲನೆ ನೀಡಲು ನಿರ್ಧರಿಸಲಾಯಿತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಉಪಸ್ಥಿತರಿದ್ದರು.
ಅಕ್ಟೋಬರ್ 25ರಿಂದ ನವೆಂಬರ್ 25ರವರೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ 'ವೋಟ್ ಬಚಾವೋ, ದೇಶ್ ಬಚಾವೋ, ಸಿಇಸಿ ಹಟಾವೋ' ರ್‍ಯಾಲಿಗಳನ್ನು ಆಯೋಜಿಸಲಾಗುವುದು ಎಂದು ಪಕ್ಷವು ಹೇಳಿದೆ.

