ಕಾಸರಗೋಡು: ಶ್ರೀ ವೆಂಕಟರಮಣ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ ಒಂಬತ್ತನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ‘ಕಾಸರಗೋಡು ಯಕ್ಷೋತ್ಸವ’ ನಗರದ ಪೇಟೆಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಿತು.
ಕ್ಷೇತ್ರ ತಂತ್ರಿಯೂ, ಯಕ್ಷಗಾನ ಕಲಾವಿದರೂ, ಕಲಾಪೋಷಕರೂ ಆದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯಕ್ಷಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶ್ರೀ ವೆಂಕಟರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಕಲಾ ಸಂಘದ ಮೂಲಕ ಕಾರ್ಯನಿರ್ವಹಿಸುತ್ತಿರುವ ಅಧ್ಯಯನ ಕೇಂದ್ರವು ನೂರಾರು ಕಲಾವಿದರನ್ನು ರಂಗಕ್ಕೆ ಪರಿಚಯಿಸಿದೆ. ಸಂಸ್ಥೆಯು ಇನ್ನಷ್ಟು ಉನ್ನತಿ ಸಾಧಿಸಲಿ ಎಂದು ಅವರು ಹಾರೈಸಿದರು.
ಅಧ್ಯಯನ ಕೇಂದ್ರದ ಅಧ್ಯಕ್ಷ ಕೆ.ಎನ್. ರಾಮಕೃಷ್ಣ ಹೊಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುತ್ಯಾಳ ಯಕ್ಷಗಾನ ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ಡಾ. ಹರಿಕಿರಣ್ ಬಂಗೇರ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಗೋಪಾಲಕೃಷ್ಣ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀ ವೆಂಕಟರಮಣ ಬಾಲಗೋಕುಲದ ಮಕ್ಕಳಿಂದ ಪ್ರಾರ್ಥನೆ ನಡೆಯಿತು. ಕಿಶೋರ್ ಕುಮಾರ್ ಎಸ್.ವಿ.ಟಿ. ಸ್ವಾಗತಿಸಿದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ರೂಪಕಲಾ ಹೊಳ್ಳ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ನಾಟ್ಯಗುರು ರಾಕೇಶ್ ರೈ ಅಡ್ಕ ಅವರ ನಿರ್ದೇಶನದಲ್ಲಿ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ‘ಶ್ರೀನಿವಾಸ ಕಲ್ಯಾಣ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.



