ನವದೆಹಲಿ (PTI): 2021ರ ಲಖೀಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯಲ್ಲಿ ಸ್ಥಳೀಯ ನ್ಯಾಯಾಧೀಶರು ಲೋಪ ಎಸಗಿದ್ದಾರೆ ಎಂಬ ಆರೋಪಗಳ ಕುರಿತು ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ರೈತರ ಮೇಲಿನ ದಾಳಿಗೆ ಸಂಬಂಧಿಸಿದ ಹಲವು ಪ್ರಕರಣಗಳನ್ನು ಸ್ವತಃ ತನಗೆ ವರ್ಗಾಯಿಸಿಕೊಂಡು, ನಂತರ ಆರೋಪಿಗಳನ್ನು ಖುಲಾಸೆಗೊಳಿಸಿದ ಆರೋಪವು ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರ ಮೇಲಿದೆ.
ತೀವ್ರ ಸಂಚಲನ ಮೂಡಿಸಿದ ಪ್ರಕರಣದ ವಿಚಾರಣೆ ನಡೆಸುವ ಸಂಬಂಧ ಆದಷ್ಟು ಬೇಗ ಹೊಸ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ, ವಿ. ಮೋಹನಾ ಅವರ ಪೀಠವು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದೆ.
'ಲಖೀಂಪುರಿ ಖೇರಿ ನ್ಯಾಯಾಲಯದ ನ್ಯಾಯಾಧೀಶರ ವರ್ತನೆಯು ಆಕ್ಷೇಪಾರ್ಹವಾಗಿದೆ. ಹಲವು ಪ್ರಕರಣಗಳನ್ನು ತಾವೇ ವಹಿಸಿಕೊಂಡು ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ' ಎಂದು ಸಂತ್ರಸ್ತರ ಪರವಾಗಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಸೆ. 22ರಂದು ವಾದ ಮಂಡಿಸಿದ್ದ ಪ್ರಶಾಂತ್ ಭೂಷಣ್ ಅವರ ಹೇಳಿಕೆಗಳನ್ನು ದಾಖಲಿಸಿದ್ದ ಸುಪ್ರೀಂಕೋರ್ಟ್, ಈ ಪ್ರಕರಣದ ಕುರಿತು ತಕ್ಷಣವೇ ಗಮನಹರಿಸಿ, ತೆಗೆದುಕೊಂಡಿರುವ ಕ್ರಮಗಳ ಕುರಿತು ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಸೂಚನೆ ನೀಡಿತ್ತು.
ನ್ಯಾಯಾಧೀಶರ ವಿರುದ್ಧ ಕೇಳಿಬಂದ ಆರೋಪಗಳಿಗೆ ಸಂಬಂಧಿಸಿದಂತೆ ಪರಿಶೀಲನೆಗೆ ಆಡಳಿತಾತ್ಮಕ ಸಮಿತಿ ರಚಿಸಬೇಕು ಎಂದು ಹೈಕೋರ್ಟ್‌ನ ರಿಜಿಸ್ಟ್ರಿ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು ನ್ಯಾಯಪೀಠದ ಗಮನ ಸೆಳೆದರು.
'2026ರ ಸೆ. 22ರಂದು ನೀಡಿದ ಆದೇಶದ ಮೂರನೇ ಪ್ಯಾರಾದಂತೆ ಸಂಬಂಧಿಸಿದ ನ್ಯಾಯಾಧೀಶರ ವಿರುದ್ಧ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕ್ರಮ ಕೈಗೊಳ್ಳಬೇಕು' ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
'ಈ ಪ್ರಕರಣದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೈಗೊಳ್ಳಬಹುದಾದ ಕ್ರಮಗಳ ವಿವರವೂ ಸೇರಿದಂತೆ ಹೈಕೋರ್ಟ್‌ನ ರಿಜಿಸ್ಟ್ರಾರ್ (ವಿಜೆಲಿನ್ಸ್) ಅವರು ಮುಚ್ಚಿದ ಲಕೋಟೆಯಲ್ಲಿ ವರದಿ ಕಳುಹಿಸಬೇಕು' ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಸುಪ್ರೀಂಕೋರ್ಟ್
ಪ್ರಕರಣವೇನು..?
ವಿವಾದಾಸ್ಪದ ಮೂರು ರೈತ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಉತ್ತರ ಪ್ರದೇಶ ಲಖೀಂಪುರ್ ಖೇರಿ ಜಿಲ್ಲೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. 2021ರ ಅಕ್ಟೋಬರ್ 3ರಂದು ತಿಕುನಿಯಾ ಪ್ರದೇಶಕ್ಕೆ ಉತ್ತರ ಪ್ರದೇಶದ ಆಗಿನ ಉಪ ಮುಖ್ಯಮಂತ್ರಿಯಾಗಿದ್ದ ಕೇಶವ್ ಪ್ರಸಾದ್ ಮೌರ್ಯ ಅವರು ಭೇಟಿ ನೀಡಿದ್ದರು. ಈ ವೇಳೆ ರೈತರು ಕಪ್ಪುಪಟ್ಟಿ ತೋರಿಸಿ ಪ್ರತಿಭಟನೆ ದಾಖಲಿಸಿದ್ದರು. ಆಗ ಸ್ಥಳೀಯ ಸಂಸದ ಅಜಯ್ ಮಿಶ್ರಾ ಅವರ ಮಗ ಆಶೀಶ್ ಮಿಶ್ರಾ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ತನ್ನ ಎಸ್‌ಯುವಿಯನ್ನು ಹರಿಸಿದ್ದನು. ಇದರಿಂದ ರೊಚ್ಚಿಗೆದ್ದ ರೈತರು ಡಿಸಿಎಂ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿದ್ದರು. ಸಂಘರ್ಷದಲ್ಲಿ ನಾಲ್ವರು ರೈತರು ಮೂವರು ಭದ್ರತಾ ಸಿಬ್ಬಂದಿ ಹಾಗೂ ಒಬ್ಬ ಪತ್ರಕರ್ತರು ಮೃತಪಟ್ಟಿದ್ದರು. ಮಿಶ್ರಾ ಸೇರಿದಂತೆ 12 ಮಂದಿ ಆರೋಪಿಗಳ ವಿರುದ್ಧ ಕೊಲೆ ಕ್ರಿಮಿನಲ್ ಸಂಚು ಸೇರಿದಂತೆ ವಿವಿಧ ಆರೋಪಗಳಡಿ ವಿಚಾರಣೆ ನಡೆಸಲು 20223ರ ಡಿಸೆಂಬರ್ ತಿಂಗಳಲ್ಲಿ ವಿಚಾರಣಾ ನ್ಯಾಯಾಲಯವು ಆರೋಪ ನಿಗದಿ ಮಾಡಿತ್ತು.

