ನಾಗ್ಪುರ: 'ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರಂಭಿಸಿರುವ 'ಸತ್ಯಾಗ್ರಹ' ಡಿಜಿಟಲ್ ವೇದಿಕೆಯಲ್ಲಿ ಕೇವಲ ಎರಡು ದಿನಗಳಲ್ಲಿ ಸುಮಾರು 30,000 ಪ್ರತಿಭಟನೆಗಳು ದಾಖಲಾಗಿವೆ' ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಸೋಮವಾರ ತಿಳಿಸಿದ್ದಾರೆ.
'ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಭುಗಿಲೆದ್ದಿರುವ ಜನಾಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಹೆಚ್ಚುತ್ತಿರುವ ಸರ್ವಾಧಿಕಾರಿ ಧೋರಣೆಯನ್ನು ಪ್ರತಿಬಿಂಬಿಸುತ್ತದೆ' ಎಂದು ಅವರು ಹೇಳಿದ್ದಾರೆ.
ದೇಶದಾದ್ಯಂತ ಸರ್ಕಾರದ ವಿರುದ್ಧದ ಎಲ್ಲ ಪ್ರತಿಭಟನೆಗಳನ್ನು ದಾಖಲಿಸಲು 'ಸತ್ಯಾಗ್ರಹ' ಎಂಬ ಡಿಜಿಟಲ್ ವೇದಿಕೆಗೆ ನಾಯಕ ರಾಹುಲ್ ಗಾಂಧಿ ಅವರು ಇದಕ್ಕೆ ಶನಿವಾರ ಚಾಲನೆ ನೀಡಿದ್ದರು.
ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನದ ಮರುದಿನವೇ ಈ ವೇದಿಕೆಗೆ ಚಾಲನೆ ನೀಡಿದ್ದ ರಾಹುಲ್, ಸತ್ಯವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದಾಗ ಜನರಿಗೆ ನೆರವಾಗಲು ಸರ್ಕಾರದ ವಿರುದ್ಧದ ಪ್ರತಿಭಟನೆಗಳನ್ನು ಇಲ್ಲಿ ನೋಂದಾಯಿಸುವಂತೆ ಜನತೆಗೆ ಕರೆ ನೀಡಿದ್ದರು.
ದೆಹಲಿಯಲ್ಲಿ ಸೋಮವಾರದಿಂದ ಆರಂಭವಾಗಿರುವ ಮಹಾರಾಷ್ಟ್ರ ರೈತರ ಎರಡು ದಿನಗಳ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಸಪ್ಕಲ್, 'ದೇಶದಲ್ಲಿ ನಡೆಯುತ್ತಿರುವ ಎಲ್ಲಾ ಹೋರಾಟಗಳಿಗೆ ಒಗ್ಗೂಡಿದ ಧ್ವನಿ ನೀಡಲು ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಹುಲ್ ಗಾಂಧಿ ಈ ವೇದಿಕೆಯನ್ನು ಆರಂಭಿಸಿದ್ದಾರೆ' ಎಂದಿದ್ದಾರೆ.

