ಗುವಾಹಟಿ: "ಕೇರಳ, ಕರ್ನಾಟಕ ಹಾಗೂ ತೆಲಂಗಾಣದ ಕಾಂಗ್ರೆಸ್ ಸರಕಾರಗಳೇನಾದರೂ ರಾಜೀನಾಮೆ ಸಲ್ಲಿಸಿದರೆ, ನಾನು ಬ್ಯಾಲೆಟ್ ಪೇಪರ್ ನಲ್ಲಿ ಮೂಲಕ ಚುನಾವಣೆ ಎದುರಿಸಲು ಸಿದ್ಧ" ಎಂದು ಸೋಮವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಪಂಥಾಹ್ವಾನ ನೀಡಿದರು.
ಗುವಾಹಟಿಯಲ್ಲಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಿಮಂತ ಬಿಸ್ವ ಶರ್ಮ, ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಹಾಗೂ ಮತಗಳ್ಳತನದ ಆರೋಪಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಅಭಿಯಾನದ ವಿರುದ್ಧ ವಾಗ್ದಾಳಿ ನಡೆಸಿದರು.
"ಒಂದು ವೇಳೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಏನಾದರೂ ತಮ್ಮ ಸರಕಾರಗಳ ರಾಜೀನಾಮೆ ಪಡೆಯಲು ಸಿದ್ಧವಿದ್ದರೆ, ನಾನು ಮತಪತ್ರದ ಮೂಲಕ ಚುನಾವಣೆ ಎದುರಿಸಲು ಸಿದ್ಧನಿದ್ದೇನೆ. ಕೇರಳ, ಕರ್ನಾಟಕ ಮತ್ತು ತೆಲಂಗಾಣ ಸರಕಾರಗಳೂ ಕೂಡಾ ರಾಜೀನಾಮೆ ಸಲ್ಲಿಸಬೇಕು. ಯಾಕೆಂದರೆ, ಜ್ಞಾನೇಶ್ ಕುಮಾರ್ ಅಡಿ ನಡೆದ ಮತಗಳ್ಳತನದಿಂದಾಗಿಯೇ ಅವು ರಚನೆಯಾಗಿವೆ" ಎಂದು ಅವರು ವ್ಯಂಗ್ಯವಾಡಿದರು.
ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ(SIR)ಯನ್ನು ಸಮರ್ಥಸಿಕೊಂಡ ಅವರು, ದೇಶದಲ್ಲಿನ ಜನಸಂಖ್ಯೆಯಲ್ಲಿನ ಬದಲಾವಣೆಯನ್ನು ಪತ್ತೆ ಮಾಡಲು SIR ಅಗತ್ಯವಿದೆ ಎಂದು ಹೇಳಿದರು.
"ಭಾರತದಲ್ಲಿ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಅಗತ್ಯವಿದೆ. ಭಾರಿ ಅಕ್ರಮ ವಲಸೆಯಿಂದಾಗಿ ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ನ ಜನಸಂಖ್ಯೆಯಲ್ಲಿ ಬದಲಾವಣೆಯಾಗಿದೆ. ಪ್ರತಿ ದಿನ ಅಕ್ರಮ ವಲಸೆ ನಡೆಯುತ್ತಿದೆ. ಒಂದು ವೇಳೆ ನಾವೇನಾದರೂ ಮತಪಟ್ಟಿಯಿಂದ ಅವರ ಹೆಸರುಗಳನ್ನು ಅಳಿಸಿ ಹಾಕದಿದ್ದರೆ, ಭಾರತದ ಜನಸಂಖ್ಯೆ ಬದಲಾಗಲಿದೆ" ಎಂದು ಅವರು ಎಚ್ಚರಿಸಿದರು.
ಜನಸಂಖ್ಯೆಯಲ್ಲಿನ ಬದಲಾವಣೆಯನ್ನು ತಡೆಯಲು ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅತ್ಯಗತ್ಯವಾಗಿದೆ ಎಂದೂ ಅವರು ಒತ್ತಿ ಹೇಳಿದರು.
"ಪ್ರತಿ ಐದು ವರ್ಷಕ್ಕೊಮ್ಮೆ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ನಡೆಯಬೇಕು ಎಂದು ನಾನು ಆಗ್ರಹಿಸುತ್ತೇನೆ. ಆಗ ಮಾತ್ರ ಭಾರತದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಸಾಧ್ಯ" ಎಂದು ಅವರು ತಿಳಿಸಿದರು.
ಇದೇ ವೇಳೆ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿದೇಶಿ ಶಕ್ತಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದೂ ಅವರು ದೂರಿದರು. "ಅವರು ಎಲ್ಲ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಭಾರತವನ್ನು ನೇಪಾಳ ಮತ್ತು ಬಾಂಗ್ಲಾದೇಶವನ್ನಾಗಿಸಲು ಯತ್ನಿಸುತ್ತಿದ್ದಾರೆ" ಎಂದು ಆರೋಪಿಸಿದರು.



