ಲಂಡನ್: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಳ್ಳುತ್ತಿರುವುದು ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ. ಸೌದಿ ಅರೇಬಿಯ ಮೇಲೆ ಹೌತಿಗಳ ದಾಳಿಗಳು ಹೆಚ್ಚಾಗಿರುವುದು ಹಾಗೂ ತೈಲ ಪೂರೈಕೆಗೆ ಅಡ್ಡಿಯಾಗುವ ಭೀತಿ ಹೆಚ್ಚಿರುವ ಹಿನ್ನೆಲೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಮೇ ತಿಂಗಳ ಬಳಿಕದ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ ಎಂದು Aljazeera ವರದಿ ಮಾಡಿದೆ.
ಭಾರತೀಯ ಕಾಲಮಾನ ಗುರುವಾರ ಸಂಜೆ 6.41ರ ವೇಳೆಗೆ ಬ್ರೆಂಟ್ ಕಚ್ಚಾ ತೈಲದ ಫ್ಯೂಚರ್ಸ್ ಬೆಲೆ ಪ್ರತಿ ಬ್ಯಾರೆಲ್ ಗೆ 3.19 ಡಾಲರ್ (ಶೇ. 2.9) ಏರಿಕೆಯಾಗಿ 112.01 ಡಾಲರ್ ಗೆ ತಲುಪಿದೆ. ವಹಿವಾಟಿನ ಆರಂಭದಲ್ಲಿ ಬೆಲೆ 112.68 ಡಾಲರ್ ಗೆ ಏರಿಕೆಯಾಗಿತ್ತು. ಇದು ಮೇ 18ರ ಬಳಿಕದ ಗರಿಷ್ಠ ಮಟ್ಟವಾಗಿದೆ.
ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲದ ಬೆಲೆಯೂ ಏರಿಕೆಯಾಗಿದೆ. ಬೆಲೆ ಶೇ. 2.5ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್ ಗೆ 99.56 ಡಾಲರ್ ಗೆ ತಲುಪಿದೆ. ವಹಿವಾಟಿನ ಆರಂಭದಲ್ಲಿ ಬೆಲೆ 100.09 ಡಾಲರ್ ಗೆ ಏರಿಕೆಯಾಗಿತ್ತು.
ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ನಡೆಯುತ್ತಿರುವ ದಾಳಿಗಳು ಹಾಗೂ ಸೌದಿ ಅರೇಬಿಯ ಮತ್ತು ಅದರ ತೈಲ ಮೂಲಸೌಕರ್ಯದ ಮೇಲೆ ಹೌತಿಗಳು ನಡೆಸುತ್ತಿರುವ ದಾಳಿಗಳು ತೈಲ ಮಾರುಕಟ್ಟೆಯ ಆತಂಕವನ್ನು ಹೆಚ್ಚಿಸಿವೆ ಎಂದು ಪಿವಿಎಂ ಆಯಿಲ್ ನ ವಿಶ್ಲೇಷಕ ತಮಸ್ ವರ್ಗಾ ಹೇಳಿದ್ದಾರೆ.
'ಸಂಘರ್ಷಕ್ಕೂ ಮುನ್ನ ಇದ್ದ ಮಟ್ಟವನ್ನು ಮೀರಿದ ಮಧ್ಯಪ್ರಾಚ್ಯದ ಕಚ್ಚಾ ತೈಲ ರಫ್ತಿನ ವರದಿಗಳಿದ್ದರೂ, ಈ ದಾಳಿಗಳು ಪೂರೈಕೆಯ ಸ್ಥಿರತೆಯ ಬಗ್ಗೆ ಕಳವಳ ಮೂಡಿಸಿವೆ' ಎಂದು ಅವರು ತಿಳಿಸಿದ್ದಾರೆ.
ಅಮೆರಿಕದ ಮಧ್ಯಂತರ ಚುನಾವಣೆಗಳವರೆಗೂ ತೈಲ ಬೆಲೆ ಇಳಿಕೆಯಾಗುವ ನಿರೀಕ್ಷೆಯಿಲ್ಲ. ಹೀಗಾಗಿ, ಬೆಲೆಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರ್ಗಾ ಅಭಿಪ್ರಾಯಪಟ್ಟಿದ್ದಾರೆ.



