ವಾಷಿಂಗ್ಟನ್: ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾದೊಂದಿಗಿನ ಹೆಚ್ಚುತ್ತಿರುವ ಸ್ಪರ್ಧೆಯ ನಡುವೆಯೇ, ಕೃತಕ ಬುದ್ಧಿಮತ್ತೆ (ಎ.ಐ) ಪೂರೈಕೆ ಸರಪಳಿಗಳನ್ನು ರಕ್ಷಿಸುವುದು ತಮ್ಮೆಲ್ಲರ 'ಸಮಾನ ಜವಾಬ್ದಾರಿ' ಎಂದು ಪರಿಗಣಿಸುವ ಒಪ್ಪಂದಕ್ಕೆ ಭಾರತ, ಅಮೆರಿಕ ಹಾಗೂ ಇತರ ಎಂಟು ದೇಶಗಳು ಸಹಿ ಹಾಕಿವೆ.
ಅಮೆರಿಕ, ಆಸ್ಟ್ರೇಲಿಯಾ, ಭಾರತ, ಇಸ್ರೇಲ್, ಜಪಾನ್, ದಕ್ಷಿಣ ಕೊರಿಯಾ, ಕತಾರ್, ಸಿಂಗಪುರ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಬ್ರಿಟನ್ ಸರ್ಕಾರಗಳು ಜಂಟಿಯಾಗಿ 'ಸ್ಯಾನ್ ಫ್ರಾನ್ಸಿಸ್ಕೊ ಘೋಷಣೆ'ಗೆ ಸಹಿ ಹಾಕಿವೆ.
ಅಮೆರಿಕವು 'ಪ್ಯಾಕ್ಸ್ ಸಿಲಿಕಾ' ಶೃಂಗದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗೆ ಮತ್ತು ಎ.ಐ ಸೇರಿದಂತೆ ಇತರ ಸುಧಾರಿತ ತಾಂತ್ರಿಕ ಉದ್ಯಮಗಳಿಗೆ ಅತ್ಯಗತ್ಯವಾಗಿರುವ ಸಿಲಿಕಾನ್ ಹಾಗೂ ಇತರ ಖನಿಜಗಳ ಪೂರೈಕೆ ಸರಪಳಿಯನ್ನು ಭದ್ರಪಡಿಸುವ ಉಪಕ್ರಮವನ್ನು ಘೋಷಿಸಿತ್ತು.
ನಾವೀನ್ಯತೆ-ಪರ ನೀತಿ ಚೌಕಟ್ಟುಗಳು, ಪ್ರಮುಖ ವಲಯಗಳಲ್ಲಿ ಎ.ಐ ಅಳವಡಿಕೆ, ಎ.ಐ ವ್ಯವಸ್ಥೆಯಾದ್ಯಂತ ಪೂರೈಕೆ ಸರಪಳಿ ಸಹಕಾರ, ಸೇಫ್ ಹಾರ್ಬರ್‌ಗಳು ಮತ್ತು ಪೂರೈಕೆ ಸರಪಳಿ ಭದ್ರತಾ ಕೇಂದ್ರಗಳು ಹಾಗೂ ಎ.ಐ ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಒಳಗೊಂಡ ಐದು ಗುಂಪುಗಳನ್ನು ರಚಿಸಲು ಪ್ರಸ್ತಾಪಿಸಲಾಗಿದೆ.
'ಯಾವುದೇ ರಾಷ್ಟ್ರವು ಏಕಾಂಗಿಯಾಗಿ ಎಸ್‌ಐ ಯುಗದ ಅಡಿಪಾಯವನ್ನು ಭದ್ರಪಡಿಸಲು ಸಾಧ್ಯವಿಲ್ಲ. ಎಸ್‌ಐನಿಂದ ಸಾಧ್ಯವಾಗುವ ಸಮೃದ್ಧಿಯು, ಅದರ ಹಿಂದಿರುವ ಪೂರೈಕೆ ಸರಪಳಿಗಳು ಮತ್ತು ಮೂಲಸೌಕರ್ಯಗಳಷ್ಟೇ ದೀರ್ಘಕಾಲಿಕವಾಗಿರುತ್ತದೆ' ಎಂದು ಹೇಳಿಕೆ ತಿಳಿಸಿದೆ.
ಏನನ್ನು ರಕ್ಷಿಸಬೇಕು ಎಂಬುದನ್ನು ಒಪ್ಪಿಕೊಳ್ಳುವ ಮೂಲಕ ಮತ್ತು ಅದನ್ನು ಒಟ್ಟಾಗಿ ಸಂರಕ್ಷಿಸಲು ಬದ್ಧರಾಗುವ ಮೂಲಕ, ಪಾಲುದಾರ ರಾಷ್ಟ್ರಗಳು ನಾವೀನ್ಯತೆ, ಹೂಡಿಕೆ ಮತ್ತು ಅಭಿವೃದ್ಧಿ ಹೊಂದಲು ಸುರಕ್ಷಿತ ಅಡಿಪಾಯವನ್ನು ಹಾಕುತ್ತಿವೆ ಎಂದು ಘೋಷಣೆಯಲ್ಲಿ ತಿಳಿಸಲಾಗಿದೆ.



