ವಿಶಾಖಪಟ್ಟಣ: ಭಾರತ ಹಾಗೂ ಅಮೆರಿಕ ನಡುವಿನ ರಕ್ಷಣಾ ಸಹಕಾರ ಮತ್ತು ನೈಸರ್ಗಿಕ ವಿಪತ್ತು ನಿರ್ವಹಣಾ ಕಾರ್ಯತಂತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಉಭಯ ದೇಶಗಳ ಜಂಟಿ ತ್ರಿವಿಧ ಸೇನಾ ಸಮರಾಭ್ಯಾಸ ‘ಟೈಗರ್ ಟ್ರಯಂಫ್ 2026’ರ ಐದನೇ ಆವೃತ್ತಿಗೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಚಾಲನೆ ದೊರೆತಿದೆ. ನವೆಂಬರ್ 2 ರಂದು ಅಧಿಕೃತವಾಗಿ ಆರಂಭಗೊಂಡ ಈ ದ್ವಿಪಕ್ಷೀಯ ಸೇನಾ ಕಸರತ್ತಿನಲ್ಲಿ ಉಭಯ ರಾಷ್ಟ್ರಗಳ ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆಗಳು ಸಕ್ರಿಯವಾಗಿ ಪಾಲ್ಗೊಂಡಿವೆ.
ಪ್ರಾದೇಶಿಕ ತುರ್ತು ಪರಿಸ್ಥಿತಿಗಳು ಮತ್ತು ನೈಸರ್ಗಿಕ ವಿಕೋಪಗಳನ್ನು ಜಂಟಿಯಾಗಿ ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ವೃದ್ಧಿಸುವುದು ಹಾಗೂ ಎರಡೂ ಸೇನೆಗಳ ನಡುವಿನ ಪರಸ್ಪರ ಕಾರ್ಯಾಚರಣೆ ಸಾಮರ್ಥ್ಯವನ್ನು (Interoperability) ಸುಧಾರಿಸುವುದು ಈ ಅಭ್ಯಾಸದ ಪ್ರಮುಖ ಗುರಿಯಾಗಿದೆ.
ಭಾರತ ಮತ್ತು ಅಮೆರಿಕ ನಡುವಿನ ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆಯ ಬೆಳವಣಿಗೆ ಹಾಗೂ ಪರಸ್ಪರ ಬದ್ಧತೆಗೆ ‘ಟೈಗರ್ ಟ್ರಯಂಫ್’ ನಿದರ್ಶನವಾಗಿದೆ ಎಂದು ಯುಎಸ್ ಪೆಸಿಫಿಕ್ ಫ್ಲೀಟ್‌ನ ಉಪ ಕಮಾಂಡರ್ ರಿಯರ್ ಅಡ್ಮಿರಲ್ ಜೋಕಿನ್ ಮಾರ್ಟಿನೆಜ್ ಡಿ ಪಿನಿಲೋಸ್ ತಿಳಿಸಿದ್ದಾರೆ.
ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ, ಸ್ಥಿರತೆ ಹಾಗೂ ಮುಕ್ತ ವಾತಾವರಣ ಕಾಪಾಡುವಲ್ಲಿ ಈ ಜಂಟಿ ಸಮರಾಭ್ಯಾಸ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ ಎಂದು ಅಮೆರಿಕ ನೌಕಾಪಡೆಯ ಪೆಸಿಫಿಕ್ ಫ್ಲೀಟ್ ತನ್ನ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ತಿಳಿಸಿದೆ.



