ನವದೆಹಲಿ: ದೆಹಲಿಯ ಶಾಹೀನ್ ಬಾಗ್ನ ಮನೆಯೊಂದರಲ್ಲಿ ಚಿತ್ರಹಿಂಸೆಗೆ ಒಳಗಾಗಿದ್ದ 16 ವರ್ಷದ ಮನೆಗೆಲಸದ ಬಾಲಕಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
'ಬಾಲಕಿಯನ್ನು ಪೋಷಕರಿಂದ ದೂರಮಾಡಿ, ಮನೆಗೆಲಸಕ್ಕಾಗಿ ಇರಿಸಿಕೊಳ್ಳಲಾಗಿತ್ತು. ಅವಳಿಗೆ ಕೆಲವು ದಿನಗಳಿಂದ ಆಹಾರ ನೀಡದೆ, ನಿತ್ಯ ಸುಮಾರು 20 ತಾಸು ಕೆಲಸ ಮಾಡುವಂತೆ ಹಿಂಸಿಸಲಾಗುತ್ತಿತ್ತು ಮತ್ತು ಕಾದ ಸರಳುಗಳಿಂದ ದೇಹವನ್ನು ಸುಡುವ ಶಿಕ್ಷೆಯನ್ನೂ ನೀಡಲಾಗುತ್ತಿತ್ತು' ಎಂದೂ ಮಾಹಿತಿ ನೀಡಿದ್ದಾರೆ.
'ಬಾಲಕಿಯನ್ನು ಮನೆಗೆಲಸಕ್ಕೆ ಇರಿಸಿಕೊಂಡಿರುವ ಕುರಿತು ಸ್ವಯಂಸೇವಾ ಸಂಸ್ಥೆಯೊಂದರ ದೂರು ಆಧರಿಸಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ದೆಹಲಿ ಪೊಲೀಸರು ನ.3 ಮತ್ತು 4ರಂದು ಕಾರ್ಯಾಚರಣೆ ನಡೆಸಿದ್ದರು. ಮಹಿಳೆಯೊಬ್ಬರು ಬಾಲಕಿಯನ್ನು ಕೆಲಸಕ್ಕೆ ಇರಿಸಿಕೊಂಡಿದ್ದರು' ಎಂದು ತಿಳಿಸಿದರು.
'ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 2 ಗಂಟೆಯವರೆಗೂ ಮನೆಗೆಲಸ ಮಾಡಿಸುತ್ತಿದ್ದರು. ಬೆಳಿಗ್ಗೆ 11 ಗಂಟೆಗೆ ಒಂದು ಚಹಾ ಕೊಡುತ್ತಿದ್ದರಷ್ಟೆ. ಆಗೀಗ ಉಳಿದ ಆಹಾರ ಕೊಡುತ್ತಿದ್ದರು. ಕಾದ ಕಬ್ಬಿಣದಿಂದ ಕೈ, ಹಿಂಭಾಗ ಸುಟ್ಟಿದ್ದಾರೆ ಮತ್ತು ಬಿಸಿ ಚಾಕುವಿನಿಂದ ಗಾಯಗೊಳಿಸಿದ್ದಾರೆ. ತಲೆಗೂ ಹೊಡೆದಿದ್ದಾರೆ' ಎಂದು ಬಾಲಕಿ ಹೇಳಿಕೆಯಲ್ಲಿ ತಿಳಿಸಿದ್ದಾಳೆ.
'ಒಮ್ಮೆ ಸಣ್ಣ ತಪ್ಪಿಗಾಗಿ ಹೊಡೆದಿದ್ದರು ಮತ್ತು ಮೂರು ದಿನಗಳವರೆಗೆ ನೀರು, ಆಹಾರ ಕೊಟ್ಟಿರಲಿಲ್ಲ. ಒಂದು ವರ್ಷದಲ್ಲಿ ಹೆಚ್ಚೆಂದರೆ ಎರಡು ಮೂರು ಬಾರಿಯಷ್ಟೇ ಪೋಷಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಒಮ್ಮೆಯೂ ಅವರನ್ನು ಭೇಟಿಯಾಗಲು ಬಿಟ್ಟಿಲ್ಲ' ಎಂದೂ ದೂರಿದ್ದಾಳೆ.
'ಶಿಕ್ಷಣವನ್ನು ಮುಂದುವರಿಸಿ, ಶಿಕ್ಷಕಿಯಾಗುವ ಬಯಕೆಯಿದೆ' ಎಂದು ಬಾಲಕಿ ತಿಳಿಸಿದ್ದಾಳೆ.



