ಮುಳ್ಳೇರಿಯ: ಸಿಂಗಾಪುರಕ್ಕೆ ಉದ್ಯೋಗ ವಿಸಾ ದೊರಕಿಸಿಕೊಡುವ ಭರವಸೆ ನೀಡಿ ಯುವಕನಿಂದ 2.89 ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಲಪ್ಪುರಂ ಕರುವಾರಕುಂಡ್ ನಿವಾಸಿ ಮುಹಮ್ಮದ್ ರಿಶಾದ್ನ ವಿರುದ್ಧ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಬೋವಿಕ್ಕಾನ ಸನಿಹದ ಮುಳಿಯಾರು ಕಾನತ್ತೂರಿನಲ್ಲಿ ವಾಸಿಸುವ ಎಂ. ವಿಷ್ಣು (26) ಅವರ ದೂರಿನನ್ವಯ ಈ ಕೇಸು ದಾಖಲಾಗಿದೆ. ವೀಸಾ ನೀಡುವುದಾಗಿ ಫೋನ್ ಹಾಗೂ ವಾಟ್ಸಾಪ್ ಮೂಲಕ ತನ್ನನ್ನು ಸಂಪರ್ಕಿಸಿದ್ದ ಮುಹಮ್ಮದ್ ರಿಶಾದ್ ಬ್ಯಾಂಕ್ ಖಾತೆ ಮೂಲಕ ಹಣ ಪಡೆದು ವಂಚಿಸಿರುವುದಾಗಿ ವಿಷ್ಣು ಆದೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 5 ಹಾಗೂ 15ರ ಮಧ್ಯೆ ತಾನು ಹಾಗೂ ಸಹೋದರ ವಿಸಾಕ್ಕಾಗಿ ಹಣ ನೀಡಿದ್ದು, ಎರಡು ತಿಂಗಳು ಕಳೆದರೂ ವಿಸಾ ಅಥವಾ ನೀಡಿದ ಹಣ ವಾಪಾಸು ಮಾಡದೇ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.


