ಕಾಸರಗೋಡು: ನಗರದಲ್ಲಿ ವರ್ಷಗಳಿಂದ ಕಾಡುತ್ತಿರುವ ಎಂ.ಜಿ. ರಸ್ತೆಯ ತೀವ್ರ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಹೊಸ ಬಸ್ ನಿಲ್ದಾಣದಿಂದ ಎಂ.ಜಿ. ರಸ್ತೆಗೆ ಪ್ರವೇಶಿಸುವ ಭಾಗದ ರಸ್ತೆ ಅಗಲೀಕರಣಕ್ಕಾಗಿ, ಶೋಭಿಕಾ ಮಳಿಗೆ ಕಾರ್ಯಾಚರಿಸುತ್ತಿರುವ ಡ್ರೀಮ್ ಸಿಟಿ ಕಟ್ಟಡದ ಮಾಲೀಕ ಪಿ. ಎ. ಮಹ್ಮೂದ್ ಅವರು ತಮ್ಮ ಒಡೆತನದ 4.30 ಮೀಟರ್ ಜಾಗವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಗರಸಭೆಗೆ ಸ್ವಯಂಪ್ರೇರಿತರಾಗಿ ಬಿಟ್ಟುಕೊಡುವ ಮೂಲಕ ಮಾದರಿಯಾಗಿದ್ದಾರೆ.
ನಗರಸಭಾ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಭೂಮಿ ಬಿಟ್ಟುಕೊಡುವ ಸಮ್ಮತಿ ಪತ್ರವನ್ನು ಪಿ. ಎ. ಮಹ್ಮೂದ್ ಅವರು ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.
ಇತರ ಕಟ್ಟಡ ಮಾಲೀಕರೊಂದಿಗೂ ಮಾತುಕತೆ ಪ್ರಗತಿಯಲ್ಲಿ:
ಹಳೆಯ ಪ್ರೆಸ್ ಕ್ಲಬ್ ಜಂಕ್ಷನ್‌ನಿಂದ ಮೆಟ್ರೋ ಹೋಟೆಲ್, ಫುಡ್ ಸ್ಟ್ರೀಟ್ ಹಾಗೂ ಕೃಷ್ಣ ಹಾರ್ಡ್‌ವೇರ್ಸ್‌ವರೆಗೆ ರಸ್ತೆಯನ್ನು ಅಭಿವೃದ್ಧಿಪಡಿಸಿರುವ ಮಾದರಿಯಲ್ಲೇ, ಹೊಸ ಬಸ್ ನಿಲ್ದಾಣದವರೆಗಿನ ರಸ್ತೆಯನ್ನೂ ಮೇಲ್ದರ್ಜೆಗೇರಿಸಲು ನಗರಸಭೆ ಯೋಜಿಸಿದೆ. ಈ ಮಾರ್ಗ ವಿಸ್ತರಣೆಗಾಗಿ ಪ್ರಮುಖ ನಾಲ್ಕು ವಾಣಿಜ್ಯ ಸಂಕೀರ್ಣಗಳಿಂದ ತಲಾ 4.30 ಮೀಟರ್ ಜಾಗ ಅಗತ್ಯವಿದೆ. ಡ್ರೀಮ್ ಸಿಟಿ ಹೊರತುಪಡಿಸಿ, ಮೈಜಿ ಕಾರ್ಯಾಚರಿಸುತ್ತಿರುವ ಮಾಲ್ ಆಫ್ ಕಾಸರಗೋಡು, ಸುಲ್ತಾನ್ ಗೋಲ್ಡ್ ಹಾಗೂ ಸಿಟಿ ಮಾಲ್ ಮಾಲೀಕರೊಂದಿಗೂ ಈ ಸಂಬಂಧ ಮಾತುಕತೆಗಳು ಚುರುಕಿನಿಂದ ಸಾಗಿವೆ.
ಎಂ.ಜಿ. ರಸ್ತೆ ವಿಸ್ತರಣೆಯ ಗಂಭೀರತೆ ಅರಿತಿದ್ದ ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಅವರು ಈ ಹಿಂದೆ ನಿಯಮಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದರು.
ಸಮ್ಮತಿ ಪತ್ರ ಸ್ವೀಕಾರ ಸಮಾರಂಭದಲ್ಲಿ ನಗರಸಭಾ ಉಪಾಧ್ಯಕ್ಷ ಕೆ. ಎಂ. ಹನೀಫ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಮೀನಾ ಮುಜೀಬ್, ಜಾಫರ್ ಕಮಾಲ್ ಹಾಗೂ ನಗರಸಭಾ ಕಾರ್ಯದರ್ಶಿ ಪಿ. ಬಿ. ಶಾಜು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಇತರ ಕಟ್ಟಡ ಮಾಲೀಕರೂ ಇದೇ ರೀತಿ ಸಹಕರಿಸುವ ನಿರೀಕ್ಷೆಯಿದೆ ಎಂದು ನಗರಸಭಾ ಆಡಳಿತ ವಿಶ್ವಾಸ ವ್ಯಕ್ತಪಡಿಸಿದೆ.



