ಕುಂಬಳೆ: 65ನೇ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವವು ನವೆಂಬರ್ 5, 11, 12 ಮತ್ತು 13 ರಂದು ಮೀಂಜ ಪಂಚಾಯತ್ ವ್ಯಾಪ್ತಿಯ ಮೀಯಾಪದವಿನಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಸಂಘಟನಾ ಸಮಿತಿಯ ಪದಾಧಿಕಾರಿಗಳು ಕುಂಬಳೆ ಪ್ರೆಸ್ ಫೋರಂನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೀಯಾಪದವಿನ ಎಸ್.ವಿ.ವಿ.ಎಚ್.ಎಸ್.ಎಸ್ ಮತ್ತು ವಿ.ಎ.ಯು.ಪಿ.ಎಸ್ ಶಾಲೆಗಳ ಜಂಟಿ ಆತಿಥ್ಯದಲ್ಲಿ ಈ ಬಾರಿಯ ಕಲೋತ್ಸವ ಆಯೋಜನೆಗೊಂಡಿದೆ.
ಉಪಜಿಲ್ಲೆಯ 142 ಶಾಲೆಗಳಿಂದ ಸುಮಾರು 5,000ಕ್ಕೂ ಅಧಿಕ ಪ್ರತಿಭಾವಂತ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಹಾಗೂ ಕಲಾ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಮೆರೆಯಲಿದ್ದಾರೆ. ನವೆಂಬರ್ 5 ರಂದು ವೇದಿಕೇತರ ಸ್ಪರ್ಧೆಗಳು ನಡೆಯಲಿದ್ದು, ನವೆಂಬರ್ 11 ರಿಂದ 13 ರವರೆಗೆ ವೇದಿಕೆ ಸ್ಪರ್ಧೆಗಳು ಜರುಗಲಿವೆ.
ಕಾರ್ಯಕ್ರಮದ ವಿವರ:
ಧ್ವಜಾರೋಹಣ: ನವೆಂಬರ್ 5 ರಂದು ಬೆಳಿಗ್ಗೆ 9 ಗಂಟೆಗೆ ಎಸ್.ವಿ.ವಿ.ಎಚ್.ಎಸ್.ಎಸ್ ಶಾಲಾ ಮ್ಯಾನೇಜರ್ ಡಾ. ಜಯಪ್ರಕಾಶ್ ನಾರಾಯಣ ಟಿ.ಕೆ. ಧ್ವಜಾರೋಹಣ ನೆರವೇರಿಸುವರು.
ಅಧಿಕೃತ ಉದ್ಘಾಟನೆ: ನವೆಂಬರ್ 12 ರಂದು ಬೆಳಿಗ್ಗೆ 9:30ಕ್ಕೆ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಕಲೋತ್ಸವವನ್ನು ಉದ್ಘಾಟಿಸಲಿದ್ದಾರೆ. ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಸಿ.ಎ. ತಾಜುದ್ದೀನ್ ಅಧ್ಯಕ್ಷತೆ ವಹಿಸಲಿದ್ದು, ಎ.ಇ.ಒ ನಾರಾಯಣ ದೇಲಂಪಾಡಿ ಸ್ವಾಗತಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ, ಬೆಂಗಳೂರು ಎಚ್.ಎ.ಎಲ್ ನಿರ್ದೇಶಕ ಎಂ.ಜಿ. ಬಾಲಸುಬ್ರಹ್ಮಣ್ಯ, ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್., ಮಂಜೇಶ್ವರ ಸಿ.ಐ. ವಿಷ್ಣು ಪ್ರಸಾದ್ ಹಾಗೂ ವಿವಿಧ ಪಂಚಾಯಿತಿಗಳ ಅಧ್ಯಕ್ಷರಾದ ಉಮ್ಮರ್ ಬೋರ್ಕಳ, ಬಶೀರ್ ಕನಿಲ, ಗೋಲ್ಡನ್ ರಹಮಾನ್, ವಿ.ಪಿ. ಅಬ್ದುಲ್ ಖಾದರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಸಮಾರೋಪ ಸಮಾರಂಭ: ನವೆಂಬರ್ 13 ರಂದು ಸಂಜೆ 3:30ಕ್ಕೆ ನಡೆಯುವ ಸಮಾರೋಪ ಸಮಾರಂಭವನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಉದ್ಘಾಟಿಸಲಿದ್ದಾರೆ. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್ ಕೆ. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿ ಅಧ್ಯಕ್ಷ ಹಾಗೂ ಮೀಂಜ ಪಂಚಾಯತ್ ಅಧ್ಯಕ್ಷ ಸಿ.ಎ. ತಾಜುದ್ದೀನ್ ಕಡಂಬಾರ್, ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ನಾರಾಯಣ ದೇಲಂಪಾಡಿ, ಜನರಲ್ ಕನ್ವೀನರ್ ರಮೇಶ್ ಕೆ.ಎನ್., ಮುಖ್ಯೋಪಾಧ್ಯಾಯಿನಿ ಮೃದುಲಾ ಕೆ.ಎಂ., ಅರವಿಂದಾಕ್ಷ ಭಂಡಾರಿ, ಹರೀಶ ಸೋಲಯ ಹಾಗೂ ಶಿವಸುಬ್ರಹ್ಮಣ್ಯ ಪ್ರಸಾದ್ ಟಿ. ಉಪಸ್ಥಿತರಿದ್ದರು.

.jpg)
.jpg)
