ಬದಿಯಡ್ಕ: ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೇ ಮರಳಿಸುವ ಸದುದ್ದೇಶದಿಂದ ಕ್ಯಾಂಪ್ಕೊ ಎಂಪ್ಲಾಯೀಸ್ ಯೂನಿಯನ್ (ಬಿಎಂಎಸ್) ವತಿಯಿಂದ, ಕ್ಯಾಂಪ್ಕೊ ಉದ್ಯೋಗಿಗಳ ಸ್ವಯಂಪ್ರೇರಿತ ಸಹಕಾರದೊಂದಿಗೆ ಸಂಗ್ರಹಿಸಲಾದ ₹5,00,000 (ಐದು ಲಕ್ಷ ರೂಪಾಯಿ) ಮೊತ್ತದ ಚೆಕ್ ಅನ್ನು ಪೆರ್ಲದಲ್ಲಿರುವ ನಾಲಂದ ಮಹಾವಿದ್ಯಾಲಯಕ್ಕೆ ಹಸ್ತಾಂತರಿಸಲಾಯಿತು.
ಕ್ಯಾಂಪ್ಕೊ ಎಂಪ್ಲಾಯೀಸ್ ಯೂನಿಯನ್ (ಬಿಎಂಎಸ್) ಅಧ್ಯಕ್ಷರಾದ ಪ್ರದೀಪ್ ಕುಮಾರ್ ಪಿ.ಎ. ಅವರ ನೇತೃತ್ವದಲ್ಲಿ ಈ ಸಮಾಜಮುಖಿ ಕಾರ್ಯವನ್ನು ಕೈಗೊಳ್ಳಲಾಯಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾಗಿರುವ ನಾಲಂದ ಮಹಾವಿದ್ಯಾಲಯವು ಸಂಸ್ಕೃತಿ, ಸಂಸ್ಕಾರ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದೆ. ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ದೇಣಿಗೆಯನ್ನು ನೀಡಲಾಗಿದೆ.
ಚೆಕ್ ಸ್ವೀಕರಿಸಿದ ನಾಲಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಜಯಗೋವಿಂದ ಉಕ್ಕಿನಡ್ಕ ಹಾಗೂ ಕೋಶಾಧಿಕಾರಿ ಶಶಿಭೂಷಣ ಶಾಸ್ತ್ರಿ ಅವರು ಸಂಘಟನೆಯ ಈ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಕ್ಯಾಂಪ್ಕೊ ನಿರ್ದೇಶಕರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಶಂ.ನಾ. ಖಂಡಿಗೆ, ರಾಜಶೇಖರ ಪೆರ್ಲ ಹಾಗೂ ಶ್ಯಾಮಲಾ ಪತ್ತಡ್ಕ ಉಪಸ್ಥಿತರಿದ್ದರು. ಕ್ಯಾಂಪ್ಕೊ ಎಂಪ್ಲಾಯೀಸ್ ಯೂನಿಯನ್ (ಬಿಎಂಎಸ್) ಪ್ರಧಾನ ಕಾರ್ಯದರ್ಶಿ ವಿನೋದ್, ಉಪಾಧ್ಯಕ್ಷ ವಾಸುದೇವ ಹಾಗೂ ಖಜಾಂಚಿ ಸಂದೇಶ್ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು. ಈ ಸತ್ಕಾರ್ಯಕ್ಕೆ ಸ್ವಯಂಪ್ರೇರಿತವಾಗಿ ಆರ್ಥಿಕ ಸಹಕಾರ ನೀಡಿದ ಎಲ್ಲಾ ಕ್ಯಾಂಪ್ಕೊ ಉದ್ಯೋಗಿಗಳಿಗೆ ಸಂಘಟನೆ ಧನ್ಯವಾದಗಳನ್ನು ಸಲ್ಲಿಸಿದೆ.

.jpg)
.jpg)
