ಮುಳ್ಳೇರಿಯ: ಬೇಕಲ್ ಗೋಕುಲಂ ಗೋಶಾಲೆಯ ಪರಂಪರಾ ವಿದ್ಯಾಪೀಠದಲ್ಲಿ ನಡೆಯುತ್ತಿರುವ ಆರನೇ ದೀಪಾವಳಿ ಸಂಗೀತೋತ್ಸವದ ಮೂರನೇ ದಿನದಂದು, ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ, ಕರ್ನಾಟಕ ಸಂಗೀತಜ್ಞೆ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತೆ ವೈಕಂ ವಿಜಯಲಕ್ಷ್ಮಿ ಅವರು ಗೋಪೂಜೆ ನೆರವೇರಿಸಿ ನಂದಿ ಮಂಟಪದಲ್ಲಿ ಸಂಗೀತ ಕಛೇರಿ ನಡೆಸಿಕೊಟ್ಟರು.
ಸರಸ್ವತಿ ರಾಗದ "ಸುಮುಖೈಕದಂತ" ವರ್ಣದೊಂದಿಗೆ ಕಛೇರಿ ಆರಂಭಿಸಿದ ಅವರು, ಸಾವೇರಿ ರಾಗದ "ಶ್ರೀ ಕಾಂಚಿ ನಾಯಿಕೆ", ನಾರಾಯಣಿ ರಾಗದ ತ್ಯಾಗರಾಜ ಕೃತಿ "ರಾಮ ನೀವೇ", ದೀಪಾವಳಿ ರಾಗದ "ಮಾಮವ ಗಾನಲೋಲ" ಹಾಗೂ ಸಾರಮತಿ ರಾಗದ "ಎಲ್ಲೆಲ್ಲೂ ಸಂಗೀತವೇ" ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿದರು. ಇದರೊಂದಿಗೆ, "ಚೋಟ್ಟಾನಿಕ್ಕರ ಅಮ್ಮ" ಚಿತ್ರದ ಗೀತೆಯನ್ನೂ ಪ್ರಸ್ತುತಪಡಿಸಿದರು. ಮುಂದಿನ ದೀಪಾವಳಿ ಸಂಗೀತೋತ್ಸವದಲ್ಲಿ ಮತ್ತೆ ಬಂದು ಹಾಡುವುದಾಗಿ ತಿಳಿಸಿದ ಅವರು, ತಿಲ್ಲಾನದೊಂದಿಗೆ ಕಛೇರಿಯನ್ನು ಮುಕ್ತಾಯಗೊಳಿಸಿದರು.
ಪಕ್ಕವಾದ್ಯದಲ್ಲಿ ಮಾಂಗಾಡ್ ರಂಜಿತ್ (ವಯಲಿನ್), ಕಲ್ಲೇಕುಳಂಗರ ಉಣ್ಣಿಕೃಷ್ಣನ್ (ಮೃದಂಗ), ರೋಹಿತ್ ಪ್ರಸಾದ್ (ಘಟಂ) ಮತ್ತು ಪಯ್ಯನ್ನೂರು ಗೋವಿಂದ ಪ್ರಸಾದ್ (ಮೋರ್ಸಿಂಗ್) ಸಹಕರಿಸಿದರು.

.jpg)
