ನವದೆಹಲಿ: ಜಿಲ್ಲಾ ನ್ಯಾಯಾಂಗಗಳಲ್ಲಿ 7,300ಕ್ಕೂ ಹೆಚ್ಚು ಹುದ್ದೆಗಳು ಹಾಗೂ ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯಗಳಲ್ಲಿ ಸುಮಾರು 300 ನ್ಯಾಯಾಧೀಶರ ಹುದ್ದೆಗಳು ಖಾಲಿ ಉಳಿದಿವೆ. ಒಟ್ಟು ಬಾಕಿ ಇರುವ ಪ್ರಕರಣಗಳ ಸಂಖ್ಯೆ ಈಗ 5.8 ಕೋಟಿ ಮೀರಿದ್ದು, ನ್ಯಾಯದಾನ ವ್ಯವಸ್ಥೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಮತ್ತು ದಿನದಿಂದ ದಿನಕ್ಕೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ ಎಂದು ವರದಿಯಾಗಿದೆ.
ನ್ಯಾಯಾಲಯದ ಹೊರಗಿನ ಬೋರ್ಡ್‌ನಲ್ಲಿ ನ್ಯಾಯಾಧೀಶರು ರಜೆಯಲ್ಲಿದ್ದಾರೆ ಅಥವಾ ಹುದ್ದೆ ಖಾಲಿ ಇದೆ ಎಂದು ಬರೆದಿರುತ್ತದೆ. ಒಳಗೆ ನೂರಾರು ಕಡತಗಳು ಕಾಯುತ್ತಿರುತ್ತವೆ. ಹೊರಗೆ ನೂರಾರು ಕಕ್ಷಿದಾರರು ಕಾಯುತ್ತಿರುತ್ತಾರೆ. ಕೆಲವರು 10 ವರ್ಷಗಳಿಂದ ಕಾಯುತ್ತಿದ್ದಾರೆ. ಇನ್ನು ಕೆಲವರು 15 ವರ್ಷಗಳಿಂದ ಕಾಯುತ್ತಿದ್ದಾರೆ. ಇದನ್ನು ತತ್‌ಕ್ಷಣವೇ ಪರಿಹರಿಸಬೇಕಿದೆ ಎಂದು ಈ ವಿಷಯಗಳ ಬಗ್ಗೆ ತಿಳಿದಿರುವ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಮತ್ತು ಕಾನೂನು ತಜ್ಞರು ಹೇಳುತ್ತಾರೆ. ಇದಕ್ಕೆ ಪರಿಹಾರ ಸರಳವಾಗಿದೆ: ನೇಮಕಾತಿಗಳನ್ನು ನಿಗದಿತ ಸಮಯದೊಳಗೆ ಮಾಡಬೇಕು. ಇದರ ಜೊತೆಗೆ ಕೊಲಿಜಿಯಂ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುವುದು ಸೇರಿದಂತೆ ಇತರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕಾಗಿದೆ.
ಅಲಹಾಬಾದ್ ಉಚ್ಚ ನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿ ಎಸ್.ಆರ್. ಸಿಂಗ್ ಅವರು, ''ಇದು ಕಾನೂನಿನ ವೈಫಲ್ಯವಲ್ಲ. ಇದು ನ್ಯಾಯಾಧೀಶರ ನೇಮಕಾತಿಯಲ್ಲಿ ಉಂಟಾದ ವೈಫಲ್ಯ'' ಎಂದು ಹೇಳಿದ್ದಾರೆ.
''ಇದಕ್ಕೆ ಅತಿ ದೊಡ್ಡ ಕಾರಣ ವಿಳಂಬ. ನಿವೃತ್ತಿಯ ದಿನಾಂಕಗಳು ವರ್ಷಗಳ ಮುಂಚಿತವಾಗಿಯೇ ತಿಳಿದಿರುತ್ತವೆ. ಆದರೂ ನ್ಯಾಯಾಧೀಶರು ನಿವೃತ್ತರಾದ ನಂತರವೇ ಖಾಲಿ ಹುದ್ದೆಯನ್ನು ಭರ್ತಿ ಮಾಡುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಕಡತ ಉಚ್ಚ ನ್ಯಾಯಾಲಯದ ಕೊಲಿಜಿಯಂನಿಂದ ಕಾನೂನು ಸಚಿವಾಲಯಕ್ಕೆ ಹೋಗುತ್ತದೆ. ಅನಂತರ ಇಂಟೆಲಿಜೆನ್ಸ್ ಬ್ಯುರೋಗೆ ಹೋಗುತ್ತದೆ. ಬಳಿಕ ಮತ್ತೆ ಉಚ್ಚ ನ್ಯಾಯಾಲಯದ ಕೊಲಿಜಿಯಂಗೆ, ಅಲ್ಲಿಂದ ಸುಪ್ರೀಂ ಕೋರ್ಟ್ ಕೊಲಿಜಿಯಂಗೆ, ಮತ್ತೆ ಸರಕಾರಕ್ಕೆೆ ಹೋಗುತ್ತದೆ. ಈ ಪ್ರಕ್ರಿಯೆಗೆ ಒಂದರಿಂದ ಎರಡು ಅಥವಾ ಸುಮಾರು ಮೂರು ವರ್ಷಗಳು ಬೇಕಾಗುತ್ತದೆ. ಒಂದು ಖಾಲಿ ಹುದ್ದೆ ಭರ್ತಿಯಾಗುವಷ್ಟರಲ್ಲಿ, ಇನ್ನೂ ಎರಡು ಖಾಲಿ ಹುದ್ದೆಗಳು ಸೃಷ್ಟಿಯಾಗುತ್ತವೆ. ಈ ಸಮಸ್ಯೆಯನ್ನು ತತ್‌ಕ್ಷಣ ಪರಿಹರಿಸಬೇಕಾಗಿದೆ'' ಎಂದು ಹೇಳಿದರು.
ಇನ್ನೊಬ್ಬ ಹಿರಿಯ ಕಾನೂನು ತಜ್ಞ, ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕೆ.ಸಿ. ಕೌಶಿಕ್ ಮಾತನಾಡಿ, ''ಖಾಲಿ ಹುದ್ದೆ ಸೃಷ್ಟಿಯಾಗುವ ಆರು ತಿಂಗಳು ಮುಂಚಿತವಾಗಿಯೇ ಉಚ್ಚ ನ್ಯಾಯಾಲಯದ ಕೊಲಿಜಿಯಂ ಹೆಸರುಗಳನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂಗೆ ಶಿಫಾರಸು ಮಾಡಬೇಕು'' ಎಂದಿದ್ದಾರೆ.
''ಸರಕಾರವು 60 ದಿನಗಳ ಒಳಗೆ ನಿರ್ಧಾರ ತೆಗೆದುಕೊಳ್ಳಬೇಕು. ಸುಪ್ರೀಂ ಕೋರ್ಟ್ ಕೊಲಿಜಿಯಂ ಇವುಗಳನ್ನು 90 ದಿನಗಳ ಒಳಗೆ ಇತ್ಯರ್ಥಪಡಿಸಬೇಕು. ಸರಕಾರ ಸ್ಪಂದಿಸದಿದ್ದರೆ, ಆ ಶಿಫಾರಸನ್ನು ಅಂಗೀಕರಿಸಲಾಗಿದೆ ಎಂದು ಪರಿಗಣಿಸಬೇಕು. ಯಾವುದೇ ಖಾಲಿ ಹುದ್ದೆಯು ಆರು ತಿಂಗಳಿಗಿಂತ ಹೆಚ್ಚು ಕಾಲ ಭರ್ತಿಯಾಗದೆ ಉಳಿಯಬಾರದು'' ಎಂದು ತಿಳಿಸಿದರು.
ಪಾಟ್ನಾ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಹಾಗೂ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ ಅಂಜನಾ ಪ್ರಕಾಶ್ ಮಾತನಾಡಿ, ''ನ್ಯಾಯಾಧೀಶರ ನೇಮಕಾತಿಯನ್ನು ಸರಿಯಾದ ಸಮಯಕ್ಕೆ ಮಾಡದಿದ್ದರೆ, ಅದು ನೇರವಾಗಿ ನ್ಯಾಯದಾನದ ಮೇಲೆ ಪರಿಣಾಮ ಬೀರುತ್ತದೆ. ದೇಶದ ವಿವಿಧ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಹುದ್ದೆಗಳು ಖಾಲಿ ಇರುವುದರಿಂದ ಕಕ್ಷಿದಾರರ ಅನೇಕ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗುತ್ತಿಲ್ಲ'' ಎಂದು ಹೇಳಿದರು.
ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ (ಎನ್‌ಜೆಡಿಜಿ) ಪ್ರಕಾರ, ಭಾರತದ ಎಲ್ಲಾ ರಾಜ್ಯ ಉಚ್ಚ ನ್ಯಾಯಾಲಯಗಳಲ್ಲಿ 64 ಲಕ್ಷದಿಂದ 65.5 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ. ಮಂಜೂರಾದ 1,112ಕ್ಕೂ ಹೆಚ್ಚು ಹುದ್ದೆಗಳಲ್ಲಿ ಸುಮಾರು 300ರಿಂದ 350 ನ್ಯಾಯಾಂಗ ಹುದ್ದೆಗಳು ಖಾಲಿ ಇವೆ.
ಇತ್ತೀಚಿನ ಎನ್‌ಜೆಡಿಜಿ ಮತ್ತು ರಿಜಿಸ್ಟ್ರಿ ಮೂಲಗಳ ಪ್ರಕಾರ, 2026ರ ನವೆಂಬರ್ ಹೊತ್ತಿಗೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ಒಟ್ಟು ಸಂಖ್ಯೆ ಸುಮಾರು 93,000 ರಿಂದ 95,000ರಷ್ಟಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 18.375 ನೋಂದಾಯಿತ ಸಿವಿಲ್ ಪ್ರಕರಣಗಳು (ಮತ್ತು ನೋಂದಾಯಿತವಲ್ಲದ/ದೋಷಪೂರಿತ ಪ್ರಕರಣಗಳು) ಬಾಕಿ ಇವೆ. ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 73,967 ನೋಂದಾಯಿತ ಅಪರಾಧ ಪ್ರಕರಣಗಳು (ಮತ್ತು ನೋಂದಾಯಿತವಲ್ಲದ/ದೋಷಪೂರಿತ ಪ್ರಕರಣಗಳು) ಬಾಕಿ ಇವೆ.



