ನವದೆಹಲಿ: ಪ್ರತಿಭಟನೆ ಮತ್ತು ಧರಣಿ ನಡೆಸುವ ಹಕ್ಕು ''ಜೀವಂತ ಪ್ರಜಾಪ್ರಭುತ್ವದ ಆತ್ಮ'' ಎಂದು ವಾದಿಸಿರುವ ಸರಕಾರಿ ನೌಕರರ ಒಕ್ಕೂಟವೊಂದು, ಪ್ರತಿಭಟನೆ ನಡೆಸಲು ಜಂತರ್ ಮಂತರ್ ಅನ್ನು ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದೆ.
ಆದರೆ, ಪ್ರತಿಭಟನೆ ನೆಪದಲ್ಲಿ ಹಿಂಸಾಚಾರಕ್ಕೆ ಅಥವಾ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳನ್ನು ಉತ್ತೇಜಿಸುವ ಸಂಘಟನೆಗಳು ಮತ್ತು ವ್ಯಕ್ತಿಗಳನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಅದು ಸರಕಾರಕ್ಕೆ ಸಲಹೆ ನೀಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬರೆದಿರುವ ಪತ್ರದಲ್ಲಿ, ಸರಕಾರಿ ನೌಕರರ ಅತಿದೊಡ್ಡ ಒಕ್ಕೂಟಗಳಲ್ಲಿ ಒಂದಾಗಿರುವ ಆಲ್ ಇಂಡಿಯಾ ಎನ್‌ಪಿಎಸ್ ನೌಕರರ ಒಕ್ಕೂಟ, ''ಕೆಲವೇ ಜನರ ಅರಾಜಕತೆಯ ವರ್ತನೆಯ ಕಾರಣಕ್ಕೆ ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಸಾಮಾನ್ಯ ನಾಗರಿಕರ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳುವುದು ಸಮರ್ಥನೀಯವಲ್ಲ'' ಎಂದು ಹೇಳಿದೆ.
ಆರೋಗ್ಯಕರ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಜನರ ಧ್ವನಿಯನ್ನು ಅಡಗಿಸಬೇಡಿ ಎಂದು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ವಿನಂತಿಸಿರುವುದಾಗಿ ನೌಕರರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಮಂಜೀತ್ ಸಿಂಗ್ ಪಟೇಲ್ ಹೇಳಿದ್ದಾರೆ.
''ಜಂತರ್ ಮಂತರ್ ಎನ್ನುವುದು ಐತಿಹಾಸಿಕ ವೇದಿಕೆಯಾಗಿದ್ದು, ಲಕ್ಷಾಂತರ ರೂಪಾಯಿ ಖರ್ಚು ಮಾಡದೆ ಬಡ ಮತ್ತು ವಂಚಿತ ನಾಗರಿಕರು ಕೂಡ ತಮ್ಮ ಸಂಕಟವನ್ನು ನೇರವಾಗಿ ಸರಕಾರಕ್ಕೆ ತಲುಪಿಸಬಹುದಾಗಿದೆ. ಇದನ್ನು ಮುಚ್ಚುವುದಿರಂದ ದೇಶದ ರಾಜಧಾನಿಯಲ್ಲಿ ಸಾಮಾನ್ಯ ಜನರ ಧ್ವನಿ ಶಾಶ್ವತವಾಗಿ ಅಡಗಿ ಹೋಗುತ್ತದೆ. ಆದುದರಿಂದ ಪ್ರಜಾಪ್ರಭುತ್ವದ ಈ ಹೃದಯವನ್ನು ಶಾಂತಿಪ್ರಿಯ ನಾಗರಿಕರಿಗಾಗಿ ಮರು ಆರಂಭಿಸುವಂತೆ ನಾನು ಕೇಂದ್ರ ಗೃಹ ಸಚಿವಾಲಯವನ್ನು ವಿನಂತಿಸುತ್ತೇನೆ'' ಎಂದು ಬರೆದಿದ್ದಾರೆ.
ತಮ್ಮ ಪತ್ರದಲ್ಲಿ, ಜಂತರ್ ಮಂತರ್ ದಶಕಗಳಿಂದ ದೇಶಾದ್ಯಂತದ ಲಕ್ಷಾಂತರ ಜನರಿಗೆ ಅಶಾಕಿರಣವಾಗಿ ಕಾರ್ಯನಿರ್ವಹಿಸುತ್ತಿದೆ. ಅವರು ನ್ಯಾಯವನ್ನು ಅರಸಿ ಮತ್ತು ತಮ್ಮ ನ್ಯಾಯಯುತ ಬೇಡಿಕೆಗಳತ್ತ ಸರಕಾರದ ಗಮನ ಸೆಳೆಯಲು ರಾಷ್ಟ್ರ ರಾಜಧಾನಿಗೆ ಬರುತ್ತಾರೆ ಎಂದು ಎನ್‌ಪಿಎಸ್ ಒಕ್ಕೂಟ ತಿಳಿಸಿದೆ.
ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ, ಸಾಮಾನ್ಯ ನಾಗರಿಕರಿಗೆ ಮತ್ತು ನೌಕರರ ಸಂಘಟನೆಗಳಿಗೆ ಜಂತರ್ ಮಂತರ್ ಅತ್ಯಂತ ಮುಖ್ಯವಾಗಿದೆ ಎಂದು ಎನ್‌ಪಿಎಸ್ ನೌಕರರ ಒಕ್ಕೂಟ ಪುನರುಚ್ಛರಿಸಿದೆ.



