ಕಾಸರಗೋಡು: ಜಾರ್ಖಂಡ್ನ ಬಿರ್ಸಾ ಮುಂಡಾ, ವಯನಾಡಿನ ತಲಕ್ಕಲ್ ಚಂದು ಸೇರಿದಂತೆ ಬುಡಕಟ್ಟು ಸಮುದಾಯದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರನ್ನು ಹೊಸ ಪೀಳಿಗೆಗೆ ಪರಿಚಯಿಸುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು.
ಎಸ್.ಟಿ. ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ನಗರದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಮಂದಿರದಲ್ಲಿ ಆಯೋಜಿಸಲಾಗಿದ್ದ 'ಜನಜಾತೀಯ ಗೌರವ ದಿವಸ್' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15ನ್ನು 'ಜನಜಾತೀಯ ಗೌರವ ದಿವಸ್' ಆಗಿ ಆಚರಿಸಲು ನಿರ್ಧರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅವರ ತ್ಯಾಗಮಯ ಜೀವನಕ್ಕೆ ದೊಡ್ಡ ಗೌರವ ಸಲ್ಲಿಸಿದೆ ಎಂದು ಅವರು ತಿಳಿಸಿದರು.
ಪಳಶ್ಶಿ ರಾಜನ ಆಡಳಿತಾವಧಿಯಲ್ಲಿ ತಲಕ್ಕಲ್ ಚಂದು ಅವರು ನಡೆಸಿದ ಬ್ರಿಟಿಷ್ ವಿರೋಧಿ ಗೆರಿಲ್ಲಾ ಹೋರಾಟವು ಅಸಾಮಾನ್ಯವಾದುದು. ಆದರೆ, ಇಂತಹ ವೀರ ಹೋರಾಟಗಳ ಇತಿಹಾಸಕ್ಕೆ ನಮ್ಮ ಪಠ್ಯಪುಸ್ತಕಗಳಲ್ಲಿ ಅರ್ಹವಾದ ಪ್ರಾಮುಖ್ಯತೆ ಸಿಗದಿರುವುದು ದುರದೃಷ್ಟಕರ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ 'ಭಗವಾನ್ ಬಿರ್ಸಾ ಮುಂಡಾ ಪ್ರಶಸ್ತಿ' ಪುರಸ್ಕೃತ ಸಂಜೀವ ಪುಳಿಕ್ಕೂರ್ ಅವರನ್ನು ಸನ್ಮಾನಿಸಲಾಯಿತು. ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ನಾರಾಯಣ ನಾಯ್ಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಸ್.ಟಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಿಬು ಪಾಣತ್ತೂರು, ಟಿ.ಡಿ. ಭರತನ್, ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ. ಕಯ್ಯಾರ್, ಎಸ್.ಟಿ. ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಣ್ಣಿಕೃಷ್ಣನ್ ಕಾರಕ್ಕೋಡ್, ಜಿಲ್ಲಾ ಕಾರ್ಯದರ್ಶಿ ಸನೀಶ್ ಮತ್ತಿತರರು ಉಪಸ್ಥಿತರಿದ್ದರು.



