HEALTH TIPS

ಮಹಾರಾಜಾಸ್ ಕಾಲೇಜು ಘಟಿಕೋತ್ಸವಕ್ಕೆ ಎಸ್‌ಎಫ್‌ಐ ಅಡ್ಡಿ: ಉನ್ನತ ಶಿಕ್ಷಣ ಸಚಿವರ ತೀವ್ರ ಆಕ್ರೋಶ; ವಿದ್ಯಾರ್ಥಿಗಳ ಕನಸುಗಳನ್ನು ನುಚ್ಚುನೂರು ಮಾಡಲು ಬಿಡೆವು ಎಂದು ಎಚ್ಚರಿಕೆ

ಕೊಚ್ಚಿ: ಎರ್ನಾಕುಲಂನ ಪ್ರತಿಷ್ಠಿತ ಮಹಾರಾಜಾಸ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಘಟಿಕೋತ್ಸವ ಸಮಾರಂಭವನ್ನು ರಾಜಕೀಯ ಹಿತಾಸಕ್ತಿಗಳಿಗಾಗಿ ಎಸ್‌ಎಫ್‌ಐ (SFI) ಕಾರ್ಯಕರ್ತರು ಅಸ್ತವ್ಯಸ್ತಗೊಳಿಸಲು ಯತ್ನಿಸಿದ ಘಟನೆಯನ್ನು ಉನ್ನತ ಶಿಕ್ಷಣ ಸಚಿವರು ತೀವ್ರವಾಗಿ ಖಂಡಿಸಿದ್ದಾರೆ. ರಾಜಕೀಯ ಪ್ರತಿಭಟನೆಗಳು ವಿದ್ಯಾರ್ಥಿಗಳ ಭವಿಷ್ಯ ಮತ್ತು ಅವರ ಕನಸುಗಳ ಮೇಲೆ ಸವಾರಿ ಮಾಡಬಾರದು ಎಂದು ಸಚಿವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 


ವರ್ಷಗಳ ಕಠಿಣ ಪರಿಶ್ರಮದ ಬಳಿಕ ಪದವಿ ಪ್ರಮಾಣಪತ್ರ ಸ್ವೀಕರಿಸಲು ಕಾಯುತ್ತಿದ್ದ ನೂರಾರು ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರ ಪಾಲಿನ ಅತ್ಯಂತ ಹೆಮ್ಮೆಯ ಕ್ಷಣವನ್ನು ಸಂಘಟನೆಯು ಕಸಿದುಕೊಳ್ಳಲು ಯತ್ನಿಸಿದೆ ಎಂದು ಸಚಿವರು ತಮ್ಮ ಪೋಸ್ಟ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಜಾಪ್ರಭುತ್ವದ ಪ್ರತಿಭಟನೆಗೆ ಗಡಿಯಿರಲಿ; ವೇದಿಕೆಯಲ್ಲೇ ಉತ್ತರಿಸಿದ ಸಚಿವರು

ಪ್ರಜಾಸತ್ತಾತ್ಮಕ ಹೋರಾಟ ಮತ್ತು ಪ್ರತಿಭಟನೆಗಳಿಗೆ ಸ್ಪಷ್ಟ ಗುರಿ ಹಾಗೂ ಕನಿಷ್ಠ ಸೌಜನ್ಯವಿರಬೇಕು ಎಂದು ನೆನಪಿಸಿದ ಸಚಿವರು, ಕಾರ್ಯಕ್ರಮದಲ್ಲಿ ಬ್ಯಾನರ್ ಪ್ರದರ್ಶಿಸಿ ಘೋಷಣೆ ಕೂಗಿದ ಪ್ರತಿಭಟನಾಕಾರರಿಗೆ ಘಟಿಕೋತ್ಸವ ಮುಗಿದ ಬಳಿಕ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ ಹೊರಡುವುದಾಗಿ ವೇದಿಕೆಯಲ್ಲೇ ಭರವಸೆ ನೀಡಿದ್ದನ್ನು ಉಲ್ಲೇಖಿಸಿದ್ದಾರೆ.

"ಸಖಾ (ಗೆಳೆಯಾ) ಒಂದು ಪ್ರಶ್ನೆ ಇದೆ" ಎಂದು ಕೇಳಿದಾಗ, ಹಿಂದಿನ ಆಡಳಿತಗಾರರಂತೆ ಅಧಿಕಾರದ ಮದದಿಂದ 'ಪ್ರಶ್ನೆಯನ್ನು ಮನೆಯಲ್ಲಿ ಹೋಗಿ ಕೇಳು' ಎಂಬ ದರ್ಪವನ್ನು ತಾನು ತೋರಿಸಲಿಲ್ಲ. ಕಿಲೋಮೀಟರ್ ದೂರದಲ್ಲೇ ಕಪ್ಪು ಮಾಸ್ಕ್ ಮತ್ತು ಕಪ್ಪು ಬಟ್ಟೆಗಳನ್ನು ಬಿಚ್ಚಿಸುತ್ತಿದ್ದ ಪಿಣರಾಯಿ ಕಾಲ ಇದಲ್ಲ ಎಂಬುದನ್ನು ಪ್ರತಿಭಟನಾಕಾರರು ನೆನಪಿಟ್ಟುಕೊಳ್ಳಬೇಕು ಎಂದು ಸಚಿವರು ನೇರವಾಗಿ ಕುಟುಕಿದ್ದಾರೆ.

ಬೆದರಿಕೆಗಳಿಗೆ ಬಗ್ಗುವುದಿಲ್ಲ; ಇತಿಹಾಸ ಕೆದಕಿ ಮಾಜಿ ಸಚಿವರಿಗೆ ವ್ಯಂಗ್ಯ

ತಮಗೆ ಪ್ರಶ್ನೆಗಳಿಗಾಗಲಿ ಅಥವಾ ಪ್ರತಿಭಟನೆಗಳಿಗಾಗಲಿ ಯಾವುದೇ ಭಯವಿಲ್ಲ; ಆದರೆ ವಿದ್ಯಾರ್ಥಿಗಳ ಕನಸುಗಳನ್ನು ಧ್ವಂಸಗೊಳಿಸಲು ಯಾರಿಗೂ ಬಿಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಹಿಂದೆ ವಿಧಾನಸಭೆಯಲ್ಲಿ ಸ್ಪೀಕರ್ ಪೀಠವನ್ನು ಧ್ವಂಸಗೊಳಿಸಿ, ಮೈಕ್ ಮತ್ತು ಕುರ್ಚಿಗಳನ್ನು ಒಡೆದುಹಾಕಿದ ಇತಿಹಾಸ ಹೊಂದಿರುವ ಮಾಜಿ ಶಿಕ್ಷಣ ಸಚಿವರಂತೆ, ಸಾರ್ವಜನಿಕವಾಗಿ ನಡೆದ ಘಟನೆಯನ್ನು ನ್ಯಾಯಾಲಯದಲ್ಲಿ ಬದಲಿಸಿ ಹೇಳುವ ಜಾಯಮಾನ ತನ್ನದಲ್ಲ ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯ ಮತ್ತು ಕ್ಯಾಂಪಸ್‌ಗಳ ಪ್ರಜಾಪ್ರಭುತ್ವದ ಮೇಲೆ ಸ್ವಚ್ಛಂದವಾಗಿ ಅಟ್ಟಹಾಸ ಮೆರೆಯಲು ಯಾವುದೇ ರಾಜಕೀಯ ಪಕ್ಷದ ಬಾವುಟಕ್ಕೂ ಪರವಾನಗಿಯಿಲ್ಲ. ಎಸ್‌ಎಫ್‌ಐ ಸಂಘಟನೆಯ ಬೆದರಿಕೆ ಅಥವಾ ಎಚ್ಚರಿಕೆಗಳಿಗೆ ತಾವಾಗಲಿ ಅಥವಾ ಉನ್ನತ ಶಿಕ್ಷಣ ಇಲಾಖೆಯಾಗಲಿ ಕಿಂಚಿತ್ತೂ ಮಣಿಯುವುದಿಲ್ಲ. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಪ್ರತಿಭಟನಾಕಾರರ ಎದುರೇ ನಿಂತು ಹೇಳಬೇಕಾದ ಎಲ್ಲ ವಿಷಯಗಳನ್ನು ಸ್ಪಷ್ಟವಾಗಿ ತಿಳಿಸಿದ ನಂತರವೇ ತಾನು ವೇದಿಕೆಯಿಂದ ನಿರ್ಗಮಿಸಿದ್ದೇನೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. 





 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries