ಕೊಚ್ಚಿ: ದೇಶದಲ್ಲಿರುವ ಎಲ್ಲರನ್ನೂ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಬಯಸುತ್ತಿದೆ. ಜನರ ಆಹಾರ ಪದ್ಧತಿ, ವೈಯಕ್ತಿಕ ಸಂಬಂಧ ಹಾಗೂ ಮತಹಕ್ಕುಗಳನ್ನು ಕೂಡ ನಿಯಂತ್ರಿಸಲು ಪ್ರಯತ್ನಿಸುತ್ತಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಹೇಳಿದ್ದಾರೆ.
ಎಸ್‌ಐಆರ್ ವಿರೋಧಿಸಿ ನಡೆಯುತ್ತಿರುವ ಸಿಜೆಪಿಯ 'ಜಂತರ್ ಮಂತರ್' ಪ್ರತಿಭಟನೆಯ ಭಾಗವಾಗಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅಭಿಜಿತ್ ದೀಪ್ಕೆ, 'ದೇಶದಲ್ಲಿ ಸ್ವತಂತ್ರ ಚುನಾವಣಾ ವ್ಯವಸ್ಥೆ ಜಾರಿಯಾಗುವವರೆಗೂ ಹೋರಾಟ ಮಾಡುತ್ತೇವೆ' ಎಂದು ಹೇಳಿದ್ದಾರೆ.
'ತಿರಂಗವನ್ನು ಎತ್ತಿಹಿಡಿದಿದ್ದಕ್ಕಾಗಿ ನನ್ನನ್ನು ಬಂಧಿಸಲಾಯಿತು. ಇದೇ ವಿಷಯಕ್ಕೆ ನನ್ನ ಸಹೋದರರಾದ ಅಶುತೋಶ್ ಮತ್ತು ಸೌರವ್ ಅವರನ್ನು ಕೂಡ ಜೈಲಿಗೆ ಕಳಿಸಲಾಯಿತು. ಬ್ರಿಟಿಷರು ಭಾರತವನ್ನು ಆಳುವಾಗ ಕೊನೆಯ ಬಾರಿ ಈ ರೀತಿಯ ಘಟನೆ ನಡೆದಿತ್ತು. ಇದನ್ನು ವಿರೋಧಿಸಿ ನಾನು ದೇಶದಾದ್ಯಂತ ತಿರಂಗಾ ಯಾತ್ರೆ ಮಾಡುತ್ತೇನೆ. ದೆಹಲಿ, ಕೇರಳಂ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ದೇಶದ ಮೂಲೆಮೂಲೆಯಲ್ಲಿ ತಿರಂಗ ಹಾರಿಸುತ್ತೇನೆ. ನೀವು(ಮೋದಿ) ನನ್ನನ್ನು ಬಂಧಿಸಬೇಕು ಎಂದಿದ್ದರೆ, ಬಂಧಿಸಿ. ನಾನು ಮತ್ತೆ ಹೊರಗಡೆ ಬಂದು ತಿರಂಗ ಹಾರಿಸುತ್ತೇನೆ' ಎಂದು ಹೇಳಿದ್ದಾರೆ.
ಮೋದಿ ಸರ್ಕಾರವು ಜನರು ಏನು ತಿನ್ನಬೇಕು, ಯಾರನ್ನು ಪ್ರೀತಿಸಬೇಕು ಹಾಗೂ ಮದುವೆಯಾಗಬೇಕು ಮತ್ತು ಯಾರಿಗೆ ಮತ ಹಾಕಬೇಕು ಎನ್ನುವುದನ್ನು ಕೂಡ ನಿಯಂತ್ರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ದೇಶವು ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧಿ ಮತ್ತು ನೆಹರೂ ಅವರ ಆದರ್ಶಗಳು ಮೇಲೆ ನಿರ್ಮಾಣವಾಗಿದೆ. ಗಾಂಧಿ ದೇಶದ ಆತ್ಮವಾಗಿದ್ದರೆ, ಅಂಬೇಡ್ಕರ್ ಅವರು ಬೆನ್ನೆಲುಬು ಹಾಗೂ ನೆಹರೂ ಅವರು ಮಿದುಳಾಗಿದ್ದಾರೆ. ಮೋದಿ ಅವರು ಇನ್ನೂ 120 ವರ್ಷ ಅಧಿಕಾರದಲ್ಲಿದ್ದರೂ ಕೂಡ ಅವರಿಗಿಂತ ದೊಡ್ಡವರು ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.



