ಕೊಚ್ಚಿ: ಕಳಡಿಯಲ್ಲಿರುವ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಅಮಾನತು ವಿಚಾರವಾಗಿ ನಟ ಪ್ರಕಾಶ್ ರಾಜ್ ಅವರು ಶನಿವಾರ ಯುಡಿಎಫ್ ಸರ್ಕಾರ ಮತ್ತು ಉನ್ನತ ಶಿಕ್ಷಣ ಸಚಿವ ರೋಜಿ ಎಂ. ಜಾನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮಾನತುಗೊಂಡ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದಿದ್ದರೆ, ವಿದ್ಯಾರ್ಥಿಗಳು ನಡೆಸುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ತಾವು ಪಾಲ್ಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಪ್ರಕಾಶ್ ರಾಜ್, ಕಳೆದ ಆರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ 16 ಅಮಾನತುಗೊಂಡ ವಿದ್ಯಾರ್ಥಿಗಳನ್ನು ಭೇಟಿಯಾದರು. ಪರೀಕ್ಷೆಗಳಿಗೆ ಹಾಜರಾಗಲು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಕಾಶ್ ರಾಜ್, 'ಇದು ಯಾವ ರೀತಿಯ ಅರಾಜಕತೆ? ವಿಶ್ವವಿದ್ಯಾಲಯದ ಅಥವಾ ಈ ರಾಜ್ಯದ ಶಿಕ್ಷಣ ಸಚಿವರ ಸರ್ವಾಧಿಕಾರಿ ವರ್ತನೆಯೇ? ಯುವಕರು ಪ್ರತಿಭಟನೆ ನಡೆಸುವುದನ್ನು ಮತ್ತು ಪ್ರಶ್ನೆಗಳನ್ನು ಕೇಳುವುದನ್ನು ತಡೆಯಲು ಎಲ್ಲರೂ ಮೋದಿ ಮತ್ತು ಕೇಂದ್ರ ಸರ್ಕಾರದಂತೆ ವರ್ತಿಸುವುದು ಇನ್ನೆಷ್ಟು ದಿನ?' ಎಂದು ಪ್ರಶ್ನಿಸಿದ್ದಾರೆ.
'ವಿಶ್ವವಿದ್ಯಾಲಯದಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎತ್ತಿತೋರಿಸಲು ವಿದ್ಯಾರ್ಥಿಗಳು ನಾಟಕ ಪ್ರದರ್ಶನ ಮಾಡಿದ್ದಾರೆ. ನಾಟಕ ಪ್ರದರ್ಶಿಸುವುದೂ ಈ ದೇಶದಲ್ಲಿ ಅಪರಾಧವೇ? ಅವರನ್ನು ಅಮಾನತುಗೊಳಿಸಿ, ಈಗ ಕ್ಷಮಾಪಣಾ ಪತ್ರ ಕೇಳುತ್ತಿದ್ದೀರಿ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಕ್ಷಮಾಪಣಾ ಪತ್ರ ಬರೆಯಲು ಈ ಪೀಳಿಗೆ ಸಾವರ್ಕರ್ ಅವರ ಪೀಳಿಗೆಯಲ್ಲ. ಗಾಂಧೀಜಿ ಕಲಿಸಿದ ಶಕ್ತಿಯಿಂದ ಈ ಪೀಳಿಗೆ ಪ್ರತಿಭಟಿಸುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ನೀಡಿದ ಹಕ್ಕುಗಳ ಮೂಲಕ ಪ್ರಶ್ನೆಗಳನ್ನು ಕೇಳುತ್ತದೆ. ಇದು ಮನುಸ್ಮೃತಿಯಲ್ಲ, ಸಂವಿಧಾನ' ಎಂದು ಅವರು ಹೇಳಿದ್ದಾರೆ.
ವಿಶ್ವವಿದ್ಯಾಲಯದಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯನ್ನು ವಿರೋಧಿಸಿ ಆಗಸ್ಟ್ 13ರಂದು ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಇದರ ಬೆನ್ನಲ್ಲೇ, ವಿಶ್ವವಿದ್ಯಾಲಯದ ಆಸ್ತಿಗೆ ಹಾನಿ ಮಾಡಲು ಯತ್ನಿಸಿದ ಆರೋಪದ ಮೇಲೆ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿತ್ತು.
ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೇರಳ ಹೈಕೋರ್ಟ್‌ನ ಏಕಸದಸ್ಯ ಪೀಠ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿತ್ತು. ಆದರೆ, ಬಳಿಕ ವಿಭಾಗೀಯ ಪೀಠ ಆ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಇದಾದ ನಂತರ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಪ್ರಕರಣವನ್ನು ಮರುಪರಿಶೀಲಿಸುವಂತೆ ಹೈಕೋರ್ಟ್‌ನ ಏಕಸದಸ್ಯ ಪೀಠಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.



