ಸಾರ್ವಜನಿಕ ಹಣದ ದುರುಪಯೋಗ ತಡೆಗೆ ಎಐ, ಡೇಟಾ ಅನಾಲಿಟಿಕ್ಸ್ ಬಳಕೆ; ಆಡಿಟ್ ಆಕ್ಷೇಪಣೆಗಳ ಇತ್ಯರ್ಥಕ್ಕೆ ಕಾಲಮಿತಿಯ ಕಾರ್ಯಯೋಜನೆ ರೂಪಿಸಲು ಪಿಎಸಿಗಳಿಗೆ ಸ್ಪೀಕರ್ ಕರೆ
ತಿರುವನಂತಪುರಂ: "ಸಾರ್ವಜನಿಕ ಖಜಾನೆಯಿಂದ ವ್ಯಯವಾಗುವ ಪ್ರತಿಯೊಂದು ರೂಪಾಯಿಗೂ ನಿಖರ ಲೆಕ್ಕವಿರಬೇಕು ಮತ್ತು ಅದನ್ನು ಮಂಜೂರಾದ ಉದ್ದೇಶಕ್ಕೆ ಸಂಪೂರ್ಣವಾಗಿ ಸದ್ಬಳಕೆ ಮಾಡಬೇಕು. ಸಾರ್ವಜನಿಕ ಹಣದ ರಕ್ಷಕರಾಗಿ ಸಂಸತ್ತು ಹಾಗೂ ರಾಜ್ಯ ವಿಧಾನಸಭೆಗಳ ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳು (ಪಿಎಸಿ - PAC) ತಮ್ಮ ಪಾತ್ರವನ್ನು ಮತ್ತಷ್ಟು ಬಲಪಡಿಸಬೇಕು," ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕರೆ ನೀಡಿದ್ದಾರೆ.
ತಿರುವನಂತಪುರಂನಲ್ಲಿ ಆಯೋಜಿಸಲಾದ ಭಾರತೀಯ ಸಂಸತ್ತು ಹಾಗೂ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸನಸಭೆಗಳ ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳ ಅಧ್ಯಕ್ಷರ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕ ಮೇಲ್ವಿಚಾರಣೆಯನ್ನು ಚುರುಕುಗೊಳಿಸಲು ಮತ್ತು ಸಾರ್ವಜನಿಕ ಹಣದ ಸೋರಿಕೆ ಹಾಗೂ ದುರುಪಯೋಗವನ್ನು ತಡೆಯಲು ಸಮಿತಿಗಳು ಕೃತಕ ಬುದ್ಧಿಮತ್ತೆ (AI), ಡೇಟಾ ಅನಾಲಿಟಿಕ್ಸ್ ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕೇವಲ ಅಂಕಿ-ಅಂಶಕ್ಕೆ ಸೀಮಿತವಾಗದಿರಲಿ ಪರಿಶೀಲನೆ
ಸಂಸದೀಯ ಪ್ರಜಾಪ್ರಭುತ್ವದಲ್ಲಿ ಪಿಎಸಿ ಅತ್ಯಂತ ಪ್ರಮುಖ ಸಾಂವಿಧಾನಿಕ ಸಂಸ್ಥೆಯಾಗಿದೆ ಎಂದ ಸ್ಪೀಕರ್, "ಕೇವಲ ಲೆಕ್ಕಪತ್ರಗಳು, ಹಂಚಿಕೆಗಳು ಮತ್ತು ಯುಟಿಲೈಸೇಶನ್ ಸರ್ಟಿಫಿಕೇಟ್‌ಗಳನ್ನು ಪರಿಶೀಲಿಸುವುದಷ್ಟೇ ಸಮಿತಿಯ ಕರ್ತವ್ಯವಲ್ಲ. ಖರ್ಚು ಮಾಡಿದ ಹಣವು ನಿರೀಕ್ಷಿತ ಫಲಿತಾಂಶ ತಂದಿದೆಯೇ, ಜನಸಾಮಾನ್ಯರ ಜೀವನದಲ್ಲಿ ಗುಣಾತ್ಮಕ ಬದಲಾವಣೆ ತಂದಿದೆಯೇ ಎಂಬುದನ್ನು ಮೌಲ್ಯಮಾಪನ ಮಾಡಬೇಕು. ಮೂಲಸೌಕರ್ಯ ಯೋಜನೆಗಳ ವಿಷಯದಲ್ಲಿ ಸಮಿತಿಗಳು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಯ ಗುಣಮಟ್ಟ ಹಾಗೂ ಗಡುವು ಪಾಲನೆಯನ್ನು ಖಚಿತಪಡಿಸಿಕೊಳ್ಳಬೇಕು," ಎಂದರು.
ಕೆಲವು ಪ್ರಕರಣಗಳಲ್ಲಿ 10, 15 ಅಥವಾ 20 ವರ್ಷಗಳಾದರೂ ಆಡಿಟ್ ಆಕ್ಷೇಪಣೆಗಳು (ಪ್ಯಾರಾಗಳು) ಇತ್ಯರ್ಥವಾಗದೆ ಉಳಿಯುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಕಾಲಮಿತಿಯೊಳಗೆ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಗ್ರ ಕ್ರಿಯಾ ಯೋಜನೆಯೊಂದಿಗೆ ಜಂಟಿಯಾಗಿ ಶ್ರಮಿಸಬೇಕು ಎಂದು ಸೂಚಿಸಿದರು.
ಪ್ರಜಾಪ್ರಭುತ್ವದ ಪ್ರಬುದ್ಧತೆ ಬಿಂಬಿಸುವ ಸಂಪ್ರದಾಯ
ಭಾರತದಲ್ಲಿ ಪಿಎಸಿ ಅಧ್ಯಕ್ಷರಾಗಿ ವಿರೋಧ ಪಕ್ಷದ ಸದಸ್ಯರನ್ನು ನೇಮಿಸುವ ವಿಶಿಷ್ಟ ಸಂಪ್ರದಾಯವನ್ನು ಸ್ಮರಿಸಿದ ಓಂ ಬಿರ್ಲಾ, "ಇದು ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಪ್ರಬುದ್ಧತೆ, ಎಲ್ಲರನ್ನೂ ಒಳಗೊಳ್ಳುವ ನೀತಿ ಮತ್ತು ಬಲವನ್ನು ಪ್ರತಿಬಿಂಬಿಸುತ್ತದೆ. ಇಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಒಮ್ಮತ ಮತ್ತು ಸಾಮೂಹಿಕ ಹೊಣೆಗಾರಿಕೆಯಿಂದ ಕೆಲಸ ಮಾಡುವುದು ಮುಖ್ಯ," ಎಂದು ಹೇಳಿದರು.
ಫಲಾಧಾರಿತ ಲೆಕ್ಕಪರಿಶೋಧನೆ ಅಗತ್ಯ: ಕೆ.ಸಿ. ವೇಣುಗೋಪಾಲ್
ಸ್ವಾಗತ ಭಾಷಣ ಮಾಡಿದ ಭಾರತೀಯ ಸಂಸತ್ತಿನ ಪಿಎಸಿ ಅಧ್ಯಕ್ಷ ಕೆ.ಸಿ. ವೇಣುಗೋಪಾಲ್ ಮಾತನಾಡಿ, "ಸಾರ್ವಜನಿಕ ವೆಚ್ಚಗಳು ಕೇವಲ ಅಂಕಿ-ಅಂಶಗಳಾಗಿ ಉಳಿಯದೆ ಸಾರ್ವಜನಿಕರಿಗೆ ಉತ್ತಮ ಸೇವೆ ಹಾಗೂ ನೈಜ ಪ್ರಯೋಜನಗಳಾಗಿ ತಲುಪಬೇಕು. ಸಂಸತ್ತಿನ ಪ್ರತಿ ಅಧಿವೇಶನದಲ್ಲೂ ಕನಿಷ್ಠ ಒಂದು ಪಿಎಸಿ ವರದಿ ಮತ್ತು ಅದರ ಮೇಲೆ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ಕಡ್ಡಾಯ ಚರ್ಚೆ ನಡೆಯಬೇಕು," ಎಂದು ಒತ್ತಾಯಿಸಿದರು.
ಸಮಾರಂಭದಲ್ಲಿ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್, ರಾಜ್ಯಸಭಾ ಉಪ ಸಭಾಪತಿ ಹರಿವಂಶ್, ಕೇರಳ ವಿಧಾನಸಭಾ ಸ್ಪೀಕರ್ ತಿರುವಂಚೂರ್ ರಾಧಾಕೃಷ್ಣನ್, ಕೇರಳ ವಿಧಾನಸಭಾ ಪಿಎಸಿ ಅಧ್ಯಕ್ಷ ಕೆ.ಎನ್. ಬಾಲಗೋಪಾಲ್ ಉಪಸ್ಥಿತರಿದ್ದರು. ಕೇರಳ ವಿಧಾನಸಭೆಯ ಉಪ ಸಭಾಪತಿ ಶಾನಿಮೋಳ್ ಉಸ್ಮಾನ್ ವಂದಿಸಿದರು. ಇದೇ ಸಂದರ್ಭದಲ್ಲಿ 'ಪಿಎಸಿ ಸಮ್ಮೇಳನ ಸಂಚಿಕೆ–2026' (ಸ್ಮರಣ ಸಂಚಿಕೆ)ಯನ್ನು ಬಿಡುಗಡೆ ಮಾಡಲಾಯಿತು.



