ವಾಷಿಂಗ್ಟನ್: ವಿಶಾಲವಾದ ಈ ಬ್ರಹ್ಮಾಂಡದಲ್ಲಿ ನಾವು ಒಬ್ಬಂಟಿಯಾಗಿದ್ದೇವೆಯೇ? ಶತಮಾನಗಳಿಂದ ಮಾನವನನ್ನು ಕಾಡುತ್ತಿರುವ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ವಿಜ್ಞಾನ ಲೋಕ ಇದೀಗ ಹೊಸ ಹಾದಿಯಲ್ಲಿ ಸಾಗುತ್ತಿದೆ. ಸಾಂಪ್ರದಾಯಿಕವಾಗಿ ರೇಡಿಯೋ ತರಂಗಗಳಿಗಾಗಿ ಕಾಯುವ ಬದಲು, ಅತಿ ಶೀತಲವಾಗಿರುವ ಉಪಗ್ರಹಗಳ ಮಂಜುಗಡ್ಡೆಯ ಪದರಗಳ ಅಡಿಯಲ್ಲಿ, ಶುಕ್ರ ಗ್ರಹದ ಸುಡುವ ಆಮ್ಲ ಮೋಡಗಳ ನಡುವೆ, ಇಷ್ಟೇ ಅಲ್ಲದೆ ದೈತ್ಯ ಕಪ್ಪುಕುಳಿಗಳ (ಬ್ಲ್ಯಾಕ್ ಹೋಲ್ಸ್) ಸುತ್ತಮುತ್ತಲೂ ಅನ್ಯಗ್ರಹ ಜೀವಿಗಳ ಇರುವಿಕೆಗಾಗಿ ವಿಜ್ಞಾನಿಗಳು ಹುಡುಕಾಟ ನಡೆಸುತ್ತಿದ್ದಾರೆ.
ತತ್ವಜ್ಞಾನಿ ಕ್ಲೆಮೆಂಟ್ ವಿದಾಲ್ ಮತ್ತು ಸಂಶೋಧಕರ ತಂಡ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಧ್ಯಯನ ವರದಿಯ ಪ್ರಕಾರ, ಜೀವಿಗಳ ಅಸ್ತಿತ್ವವು ನಾವು ಇದುವರೆಗೆ ಊಹಿಸಿದ್ದಕ್ಕಿಂತಲೂ ಅತ್ಯಂತ ವಿಚಿತ್ರವಾದ ಸ್ಥಳಗಳಲ್ಲಿ ಇರುವ ಸಾಧ್ಯತೆಯಿದೆ. ಉದಾಹರಣೆಗೆ, ಗುರು ಗ್ರಹದ ಉಪಗ್ರಹ 'ಯುರೋಪಾ' ಮತ್ತು ಶನಿ ಗ್ರಹದ ಉಪಗ್ರಹ 'ಎನ್ಸೆಲಾಡಸ್'ನಲ್ಲಿ ಅನ್ಯಗ್ರಹ ಜೀವಿಗಳಿರಬಹುದು ಎಂದು ಅಂದಾಜಿಸಲಾಗಿದೆ. ಇವುಗಳ ಹೊರಮೈ ದಪ್ಪನೆಯ ಮಂಜುಗಡ್ಡೆಯ ಪದರಗಳಿಂದ ಆವೃತವಾಗಿದ್ದರೂ, ಒಳಭಾಗದ ಉಷ್ಣತೆಯಿಂದಾಗಿ ಅವುಗಳ ಅಡಿಯಲ್ಲಿ ಅಪಾರ ಪ್ರಮಾಣದ ನೀರಿನ ಸೆಲೆಯಿರುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಇನ್ನು ಸೌರಮಂಡಲದ ಅತ್ಯಂತ ಬಿಸಿಯಾದ ಗ್ರಹ ಶುಕ್ರನತ್ತ ಗಮನಹರಿಸಿದರೆ, 465 ಡಿಗ್ರಿ ಸೆಲ್ಸಿಯಸ್‌ವರೆಗೂ ಮೇಲ್ಮೈ ತಾಪಮಾನ ಹೊಂದಿರುವ ಹಾಗೂ ಸಲ್ಫ್ಯೂರಿಕ್ ಆಮ್ಲ ತುಂಬಿದ ಮೋಡಗಳಿರುವ ಈ ಗ್ರಹದಲ್ಲಿ ಜೀವಸಂಕುಲ ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ. ಭೂಮಿಯ ಮೇಲಿನ ಜೀವಿಗಳಿಗಿಂತ ಸಂಪೂರ್ಣ ಭಿನ್ನವಾದ ಜೈವಿಕ ರಾಸಾಯನಿಕ ಕ್ರಿಯೆಗಳ ಮೂಲಕ ಇಂತಹ ಅತಿ ತೀವ್ರ ಪರಿಸರದಲ್ಲೂ ಜೀವಿಗಳು ಬದುಕುಳಿಯುವ ಸಾಧ್ಯತೆಯಿದೆ ಎಂದು ಅಧ್ಯಯನಗಳು ಸೂಚಿಸುತ್ತವೆ.
ಆದರೆ ವಿಜ್ಞಾನಿಗಳ ಶೋಧ ಇಷ್ಟಕ್ಕೇ ನಿಂತಿಲ್ಲ. ಬ್ರಹ್ಮಾಂಡದಲ್ಲಿ ಅತ್ಯಾಧುನಿಕ ವಿಜ್ಞಾನ-ತಂತ್ರಜ್ಞಾನ ಹೊಂದಿರುವ ನಾಗರಿಕತೆಗಳಿದ್ದರೆ, ಅವು ತಮ್ಮ ತಂತ್ರಜ್ಞಾನದ ಕುರುಹುಗಳನ್ನು ಬಿಟ್ಟುಹೋಗಿರಬಹುದಲ್ಲವೇ ಎಂಬ ನಿಟ್ಟಿನಲ್ಲೂ ಚಿಂತನೆ ನಡೆದಿದೆ. ಇತ್ತೀಚಿನ ಅಧ್ಯಯನವು 'ಡೈಸನ್ ಮೈಂಡ್ಸ್' (Dyson Minds) ಎಂಬ ಪರಿಕಲ್ಪನೆಯ ಕುರಿತು ಚರ್ಚಿಸುತ್ತಿದೆ. ಅಂದರೆ, ದೈತ್ಯ ಕಪ್ಪುಕುಳಿಗಳೊಳಗೆ ಬೀಳುವ ದ್ರವ್ಯದಿಂದ ಶಕ್ತಿಯನ್ನು ಹೀರಿಕೊಳ್ಳಬಲ್ಲ ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆಗಳು ಅಸ್ತಿತ್ವದಲ್ಲಿರಬಹುದು. ಇಂತಹ ವ್ಯವಸ್ಥೆಗಳು ಹೊರಸೂಸುವ ವಿಶೇಷ ಇನ್‌ಫ್ರಾರೆಡ್ ತರಂಗಗಳು ಅಥವಾ ಇತರ ಖಗೋಳ ಸಂಕೇತಗಳನ್ನು ನಮ್ಮ ದೂರದರ್ಶಕಗಳ ಮೂಲಕ ಪತ್ತೆಹಚ್ಚಲು ಸಾಧ್ಯವಿದೆ.
ತಂತ್ರಜ್ಞಾನ ಮುಂದುವರಿದಂತೆ ಬ್ರಹ್ಮಾಂಡವನ್ನು ನೋಡುವ ನಮ್ಮ ದೃಷ್ಟಿಕೋನವೂ ವಿಶಾಲವಾಗುತ್ತಿದೆ. ಅನ್ಯಗ್ರಹ ಜೀವಿಗಳೆಂದರೆ ಸಿನಿಮಾಗಳಲ್ಲಿ ತೋರಿಸುವಂತಹ ರೂಪಗಳೇ ಆಗಿರಬೇಕೆಂದಿಲ್ಲ; ಅವು ಸೂಕ್ಷ್ಮಾಣುಜೀವಿಗಳಾಗಿರಬಹುದು, ಅಥವಾ ಕೋಟ್ಯಂತರ ವರ್ಷಗಳಷ್ಟು ಹಳೆಯದಾದ ಅತ್ಯುನ್ನತ ತಂತ್ರಜ್ಞಾನದ ಪಳೆಯುಳಿಕೆಗಳೂ ಆಗಿರಬಹುದು.



