ಮಂಜೇಶ್ವರ: ಇಂದು ನಡೆಯಲಿರುವ ಪಲ್ಸ್ ಪೋಲಿಯೊ ಲಸಿಕೆ ವಿತರಣೆಯ ಪ್ರಚಾರಾರ್ಥ, ಪೋಲಿಯೊ ಬಾಧಿತರೂ ಹಾಗೂ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಹಕೀಂ ಕಂಬಾರು ಬಿಡುಗಡೆಗೊಳಿಸಿರುವ ಜಾಗೃತಿ ವೀಡಿಯೊ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಸ್ವಂತ ಜೀವನದ ಅನುಭವಗಳನ್ನು ಮುಂದಿಟ್ಟುಕೊಂಡು ಹಕೀಂ ನೀಡಿರುವ ಹೇಳಿಕೆಗಳು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಪಡೆದುಕೊಂಡಿದ್ದು, ಹಲವರು ಅದನ್ನು ವಾಟ್ಸ್‌ಆಪ್ ಸ್ಟೇಟಸ್‌ಗಳಾಗಿಯೂ ಬಳಸಿಕೊಂಡಿದ್ದಾರೆ.
ಹಕೀಂ ಕಂಬಾರು ಅವರು ವರ್ಕಾಡಿ ಕುಟುಂಬಾರೋಗ್ಯ ಕೇಂದ್ರದ ಅಟೆಂಡೆಂಟ್ ಗ್ರೇಡ್-2 ನೌಕರರಾಗಿದ್ದಾರೆ. “ತಿಳಿವಳಿಕೆ ಇಲ್ಲದ ಕಾರಣ ನಮ್ಮಂತಹ ಹಲವಾರು ಮಂದಿಗೆ ಅಂದು ಪೋಲಿಯೊ ಹನಿ ಲಸಿಕೆ ಲಭಿಸಿರಲಿಲ್ಲ. ಅದರ ಪರಿಣಾಮವಾಗಿ ಹಲವರು ಪ್ರಾಣ ಕಳೆದುಕೊಂಡರೆ, ಇನ್ನೂ ಕೆಲವರು ಸಂಕಷ್ಟ ಅನುಭವಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಇನ್ನು ಮುಂದಿನ ತಲೆಮಾರು ನಮ್ಮಂತಾಗಬಾರದು. ಪೋಲಿಯೊದಿಂದ ಇನ್ನು ಮುಂದೆ ಯಾರೂ ನೋವು ಅನುಭವಿಸಬಾರದು” ಎಂಬ ಹಕೀಂ ಅವರ ಭಾವುಕ ಮಾತುಗಳು ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸುವಂತಿವೆ.
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೂ ಪೋಲಿಯೊ ಪ್ರತಿರೋಧಕ ಹನಿ ಮದ್ದನ್ನು ಕಡ್ಡಾಯವಾಗಿ ಹಾಕಿಸಬೇಕೆಂದೂ, ಪೋಲಿಯೊ ವೈರಸ್ ಅನ್ನು ಈ ಭೂಮಿಯಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡುವವರೆಗೆ ಎಚ್ಚರಿಕೆ ಮುಂದುವರಿಸಬೇಕೆಂದೂ ಹಕೀಂ ವೀಡಿಯೊ ಮೂಲಕ ಜನರಲ್ಲಿ ಮನವಿ ಮಾಡಿದ್ದಾರೆ. “ಆ ಎರಡು ಹನಿ ಮದ್ದು ಪ್ರತಿಯೊಂದು ಮಗುವಿನ ಹಕ್ಕಾಗಿದೆ; ಜೊತೆಗೆ ಸಮಾಜದ ಹೊಣೆಗಾರಿಕೆಯೂ ಆಗಿದೆ” ಎಂಬ ಸಂದೇಶದೊಂದಿಗೆ ವೀಡಿಯೊ ಮುಕ್ತಾಯಗೊಂಡಿದೆ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ತಮ್ಮ ನಾಲ್ಕು ಚಕ್ರದ ಸ್ಕೂಟರ್‌ನಲ್ಲಿ ಸಂಚರಿಸಿ ಹಕೀಂ ಕಂಬಾರು ಪೋಲಿಯೊ ಕುರಿತು ಜಾಗೃತಿ ಯಾತ್ರೆಗಳನ್ನು ಹಮ್ಮಿಕೊಂಡಿದ್ದರು. ಇದರ ಬೆನ್ನಲ್ಲೇ ಈ ಬಾರಿ ಸಾಮಾಜಿಕ ಜಾಲತಾಣಗಳ ಮೂಲಕ ಪೋಲಿಯೊ ವಿರುದ್ಧ ಪ್ರಚಾರಕ್ಕೆ ಇಳಿದಿದ್ದಾರೆ.



