ಡಬ್ಲಿನ್: ಉಕ್ರೇನ್ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಅಬುಧಾಬಿಯಲ್ಲಿ ನಡೆದ ಎರಡು ದಿನಗಳ ಮಾತುಕತೆಯ ಬೆನ್ನಲ್ಲೇ ಅಮೆರಿಕದ ರಾಯಭಾರಿಗಳು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.
ಅಮೆರಿಕದ ರಾಯಭಾರಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜಾರೆಡ್ ಕಶ್ನರ್ ಅವರು ಮಾಸ್ಕೊಗೆ ತೆರಳಿ ಮೊದಲು ರಷ್ಯಾ ಅಧ್ಯಕ್ಷರನ್ನು ಭೇಟಿಯಾಗಲಿದ್ದಾರೆ. ಆ ಬಳಿಕ ಯುರೋಪಿಯನ್ ಸಭೆಗಳಲ್ಲಿ ಭಾಗವಹಿಸುತ್ತಿರುವ ಉಕ್ರೇನ್ ನಾಯಕ ಝೆಲೆನ್‌ಸ್ಕಿ ಅವರನ್ನು ಭೇಟಿಯಾಗಲು ಐರ್ಲೆಂಡ್‌ನ ಡಬ್ಲಿನ್‌ಗೆ ಪ್ರಯಾಣ ಬೆಳೆಸಲಿದ್ದಾರೆ.
ಈ ನಡುವೆ ಐರ್ಲೆಂಡ್‌ಗೆ ಆಗಮಿಸಿದ ಬಳಿಕ ಪ್ರತಿಕ್ರಿಯಿಸಿದ ಝೆಲೆನ್‌ಸ್ಕಿ, 'ಎರಡನೇ ಮಹಾಯುದ್ಧದ ನಂತರ ಯುರೋಪ್ ಕಂಡ ಅತ್ಯಂತ ಭೀಕರ ಸಂಘರ್ಷವನ್ನು 2027ರೊಳಗೆ ಅಂತ್ಯಗೊಳಿಸಲು ಇದೊಂದು ಸುವರ್ಣಾವಕಾಶವಾಗಬಹುದು' ಎಂದಿದ್ದಾರೆ.
'ಅಮೆರಿಕದ ಪ್ರತಿನಿಧಿಗಳು ನಿರ್ದಿಷ್ಟ ಪ್ರಸ್ತಾಪಗಳೊಂದಿಗೆ ಪುಟಿನ್ ಬಳಿಗೆ ತೆರಳಿರುವುದು ಮಹತ್ವದ ಬೆಳವಣಿಗೆ. ಅವರು ಅದೇ ರೀತಿಯ ನಿರ್ದಿಷ್ಟ ಅಂಶಗಳೊಂದಿಗೆ ಡಬ್ಲಿನ್‌ಗೆ ಮರಳಬೇಕೆಂಬುದು ನನ್ನ ಅಪೇಕ್ಷೆಯಾಗಿದೆ. ಈ ಬಗ್ಗೆ ತಮಗೆ ಅನುಮಾನಗಳಿದ್ದರೂ ಭರವಸೆ ಇದೆ' ಎಂದು ಝೆಲೆನ್‌ಸ್ಕಿ ಪ್ರತಿಕ್ರಿಯಿಸಿದ್ದಾರೆ.
ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಈ ಮಾತುಕತೆಗಳಲ್ಲಿ ಯುರೋಪ್ ಅನ್ನು ಸೇರಿಸಿಕೊಳ್ಳುವ ವಿಚಾರದಲ್ಲಿ ಅಮೆರಿಕದ ಧೋರಣೆಯಲ್ಲಿನ ಬದಲಾವಣೆಯನ್ನು ಅವರು ಸ್ವಾಗತಿಸಿದ್ದಾರೆ.
ಅಬುಧಾಬಿಯಲ್ಲಿ ಎರಡು ದಿನಗಳವರೆಗೆ ನಡೆದ ಮಾತುಕತೆಯಲ್ಲಿ ಪ್ರಮುಖವಾದ ಯಾವ ಪ್ರಗತಿಯೂ ಕಂಡುಬರದಿದ್ದರೂ ತಮ್ಮ ತಮ್ಮ ಜೈಲಿನಲ್ಲಿರುವ ಸುಮಾರು 1,000 ಸೈನಿಕರ ಬಿಡುಗಡೆಗೆ ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ವರದಿಯಾಗಿದೆ.



