ನವದೆಹಲಿ: ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಆಯೋಜಿಸಿರುವ 'ಭಾರತ್ ಶೃಂಗಸಭೆ'ಯಲ್ಲಿ ಪಾಲ್ಗೊಳ್ಳಬೇಕಿದ್ದ ನಾರ್ವೆಯ ಪತ್ರಕರ್ತೆ ಹೆಲ್ ಲಿಂಗ್ ಅವರ ವೀಸಾವನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹೆಲ್ ಲಿಂಗ್ ವಿಡಿಯೊ ಬಿಡುಗಡೆ ಮಾಡಿದ್ದಾರೆ.
ವಿಮಾನ ನಿಲ್ದಾಣಕ್ಕೆ ಹೊರಡಲು ಕೇವಲ 10 ನಿಮಿಷ ಬಾಕಿ ಇರುವಾಗ ನಾರ್ವೆಯಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಕರೆ ಬಂದಿದ್ದು, 'ನೀವು ಇಂದು ಭಾರತಕ್ಕೆ ತೆರಳುವಂತಿಲ್ಲ' ಎಂದು ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಲಿಂಗ್ ವಿಡಿಯೊದಲ್ಲಿ ದೂರಿದ್ದಾರೆ.
'ಭಾರತಕ್ಕೆ ತೆರಳಲು ನಾನು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆ ಹಾಗೂ ಬ್ಯಾಗ್ ಪ್ಯಾಕ್ ಮಾಡಿದ್ದೆ. ನನ್ನ ಪಾಸ್‌ಪೋರ್ಟ್‌ನಲ್ಲಿ ವೀಸಾ ಇತ್ತು, ರಾಜಕೀಯ ಅನುಮತಿಯೂ ಲಭಿಸಿತ್ತು. ಹೈದರಾಬಾದ್‌ನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಮಾಧ್ಯಮ, ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಭವಿಷ್ಯ ಕುರಿತು ಮಾತನಾಡಲು ನನ್ನನ್ನು ಆಹ್ವಾನಿಸಲಾಗಿತ್ತು. ಆದರೆ, ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ನನ್ನ ವೀಸಾವನ್ನು ಏಕಾಏಕಿ ರದ್ದುಗೊಳಿಸಲಾಗಿದೆ' ಎಂದು ಅವರು ಆರೋಪಿಸಿದ್ದಾರೆ.
ಪತ್ರಕರ್ತೆಯ ಈ ಆರೋಪದ ಕುರಿತು ಕೇಂದ್ರ ಗೃಹ ಸಚಿವಾಲಯವಾಗಲಿ ಅಥವಾ ವಿದೇಶಾಂಗ ವ್ಯವಹಾರಗಳ ಸಚಿವಾಲಯವಾಗಲಿ (ಎಂಇಎ) ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಒಸ್ಲೊ ಮೂಲದ ಪತ್ರಕರ್ತೆಯಾಗಿರುವ ಹೆಲ್ ಲಿಂಗ್, ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನಾರ್ವೆ ಪ್ರಧಾನಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದ ವೇಳೆ ಭಾರತದ ಪತ್ರಿಕಾ ಸ್ವಾತಂತ್ರ್ಯದ ಕುರಿತು ತೀಕ್ಷ್ಣವಾದ ಪ್ರಶ್ನೆಗಳನ್ನು ಕೇಳಿ ಸುದ್ದಿಯಾಗಿದ್ದರು.
'ಪ್ರಧಾನಿ ಮೋದಿಯವರೇ, ವಿಶ್ವದ ಅತ್ಯಂತ ಮುಕ್ತ ಪತ್ರಿಕಾರಂಗ ನಮ್ಮದು. ನಾವು ಕೇಳುವ ಕೆಲ ಪ್ರಶ್ನೆಗಳಿಗೆ ಏಕೆ ನೀವು ಉತ್ತರಿಸುವುದಿಲ್ಲ' ಎಂದು ಅವರು ಪ್ರಶ್ನಿಸಿದ್ದರು.
ಇದಾದ ಬಳಿಕ ಅವರು, 'ಭಾರತದ ಪ್ರಧಾನಿ ನರೇಂದ್ರ ಮೋದಿಯವರು ನನ್ನ ಪ್ರಶ್ನೆಗೆ ಉತ್ತರಿಸಲಿಲ್ಲ. ಅವರಿಂದ ನಾನು ಇಂತಹ ನಡೆ ನಿರೀಕ್ಷಿಸಿರಲಿಲ್ಲ. ನಮ್ಮ ಕೆಲಸವೇ ಅಧಿಕಾರಸ್ಥರನ್ನು ಪ್ರಶ್ನೆ ಮಾಡುವುದು' ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.


