HEALTH TIPS

ಅಮೆರಿಕ ಮಧ್ಯಂತರ ಚುನಾವಣೆ: ಭಾರತ ಮೂಲದ ಸುಹಾಸ್, ಅರುಣಾ, ಪಿಯಾ ದಾಂಡಿಯಾ ಗೆಲುವು

 ನ್ಯೂಯಾರ್ಕ್: ಅಮೆರಿಕದ 2026ರ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಮೂಲದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಸುಹಾಸ್ ಸುಬ್ರಮಣ್ಯಂ ಮತ್ತು ಅರುಣಾ ಮಿಲ್ಲರ್ ಮರು ಆಯ್ಕೆಯಾಗಿದ್ದರೆ, ಪಿಯಾ ದಾಂಡಿಯಾ ಮೊದಲ ಬಾರಿಗೆ ಅಮೆರಿಕದ ಕಾಂಗ್ರೆಸ್‌ಗೆ (ಸಂಸತ್) ಆಯ್ಕೆಯಾಗಿದ್ದಾರೆ. 


40 ವರ್ಷದ ಸುಹಾಸ್ ಸುಬ್ರಮಣ್ಯಂ ಅವರು ವರ್ಜೀನಿಯಾದಿಂದ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಮರು ಆಯ್ಕೆಯಾಗಿದರೆ, 61 ವರ್ಷದ ಅರುಣಾ ಮಿಲ್ಲರ್ ಅವರು ಮೇರಿಲ್ಯಾಂಡ್‌ನ ಲೆಫ್ಟಿನೆಂಟ್ ಗವರ್ನರ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇವರ ಜೊತೆಗೆ 39 ವರ್ಷದ ಪಿಯಾ ದಾಂಡಿಯಾ ಅವರು ಫ್ಲೋರಿಡಾದ 22ನೇ ಸಂಸತ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

ಸುಹಾಸ್ ಸುಬ್ರಮಣ್ಯಂಗೆ ಮತ್ತೊಮ್ಮೆ ಗೆಲುವು

ಭಾರತೀಯ ಮೂಲದ ಸುಹಾಸ್ ಸುಬ್ರಮಣ್ಯಂ ಅವರು ವರ್ಜೀನಿಯಾದ 10ನೇ ಕಾಂಗ್ರೆಸ್ (ಸಂಸತ್) ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಅವರು ಶೇ.61.5ರಷ್ಟು ಮತಗಳನ್ನು ಪಡೆದರೆ, ಅವರ ಎದುರಾಳಿ ರಿಪಬ್ಲಿಕನ್ ಪಕ್ಷದ ಡೇವ್ ಬೆಕ್‌ವಿತ್ ಶೇ.36.4ರಷ್ಟು ಮತಗಳನ್ನಷ್ಟೇ ಪಡೆದಿದ್ದಾರೆ.

ಸುಹಾಸ್ ಸುಬ್ರಮಣ್ಯಂ ಅವರು ಹೋಸ್ಟನ್‌ನಲ್ಲಿ ನೆಲೆಸಿರುವ ಭಾರತೀಯ ದಂಪತಿಯ ಪುತ್ರ. ನ್ಯೂ ಓರ್ಲಿಯನ್ಸ್‌ನ ಟುಲೇನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವಾಗಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ಕತ್ರಿನಾ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ಪುನರ್ ನಿರ್ಮಾಣದ ಸಂದರ್ಭದಲ್ಲಿ ಸ್ವಯಂ ಸೇವಕರನ್ನು ಸಂಘಟಿಸಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ಬಳಿಕ, ಅಮೆರಿಕದ ಸಂಸತ್‌ನಲ್ಲಿ ನೀತಿ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಈ ವೇಳೆ ಆರೋಗ್ಯ ಸೇವೆ ಸುಧಾರಣೆ, ವಲಸೆ ನೀತಿ ಮತ್ತು ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿಯೂ ಅವರು ಕೆಲಸ ಮಾಡಿದ್ದಾರೆ.

ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದ ಬಳಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಸರ್ಕಾರದಲ್ಲಿ ಶ್ವೇತಭವನದ ತಂತ್ರಜ್ಞಾನ ನೀತಿ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.

2019ರಲ್ಲಿ ವರ್ಜೀನಿಯಾದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಅವರು ಎರಡು ಅವಧಿಗೆ ಸೇವೆ ಸಲ್ಲಿಸಿದ್ದರು. ಬಳಿಕ ರಾಜ್ಯ ಸೆನೆಟ್ ಸದಸ್ಯರಾಗಿಯೂ ಕೆಲಸ ಮಾಡಿದ್ದರು. 2024ರಲ್ಲಿ ಮೊದಲ ಬಾರಿಗೆ ಅಮೆರಿಕದ ಕಾಂಗ್ರೆಸ್‌ಗೆ ಆಯ್ಕೆಯಾಗಿದ್ದರು.

ಪಿಯಾ ದಾಂಡಿಯಾಗೆ ಮೊದಲ ಗೆಲುವು

ಫ್ಲೋರಿಡಾದ 22ನೇ ಕಾಂಗ್ರೆಸ್ (ಸಂಸತ್) ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಿಯಾ ದಾಂಡಿಯಾ ಶೇ.51.9ರಷ್ಟು ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದಾರೆ. ಅವರ ಎದುರಾಳಿ ಕೇಸಿ ಅಸ್ಕರ್ ಶೇ.48.1ರಷ್ಟು ಮತಗಳನ್ನು ಪಡೆದಿದ್ದಾರೆ.

ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ದಂಪತಿಯ ಪುತ್ರಿಯಾಗಿರುವ ಪಿಯಾ ಈ ಹಿಂದೆ ಶಿಕ್ಷಕಿಯಾಗಿ, ಬಳಿಕ ನ್ಯೂಯಾರ್ಕ್‌ನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದ್ದರು.

ಬಡ ಕುಟುಂಬಗಳ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಅವರು ಕೆಲಸ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಶಾಲೆಯೊಂದನ್ನು ಸ್ಥಾಪಿಸಿದ್ದರು. ಅವರ ಶಾಲೆಯಲ್ಲಿ ಓದಿದ ಎಲ್ಲ ವಿದ್ಯಾರ್ಥಿಗಳೂ ಕಾಲೇಜು ಪ್ರವೇಶ ಪಡೆದಿದ್ದರು. ಅವರ ಶಾಲೆಯ ಶೇ 86ರಷ್ಟು ವಿದ್ಯಾರ್ಥಿಗಳು ಕಡಿಮೆ ಆದಾಯ ಕುಟುಂಬದ ಹಿನ್ನೆಲೆ ಹೊಂದಿದವರು.

28ನೇ ವಯಸ್ಸಿನಲ್ಲೇ ಶಾಲೆಯ ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡಿದ್ದ ಅವರು, ದೇಶದ ಅತ್ಯಂತ ಕಿರಿಯ ಶಾಲಾ ಮುಖ್ಯೋಪಾಧ್ಯಾಯರಲ್ಲಿ ಒಬ್ಬರು ಎಂಬ ಸಾಧನೆಯನ್ನೂ ಅವರು ಮಾಡಿದ್ದಾರೆ.

ಅರುಣಾ ಮಿಲ್ಲರ್‌ಗೆ ಮರು ಆಯ್ಕೆ

ಭಾರತೀಯ ಮೂಲದ ಅರುಣಾ ಮಿಲ್ಲರ್ ಅವರು ಮೇರಿಲ್ಯಾಂಡ್ ರಾಜ್ಯದ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ಮರು ಆಯ್ಕೆಯಾಗಿದ್ದಾರೆ. ಇದರಿಂದ ಅಮೆರಿಕ ರಾಜಕೀಯದಲ್ಲಿ ಭಾರತೀಯ ಮೂಲದ ನಾಯಕರ ಪ್ರಭಾವ ಮತ್ತಷ್ಟು ಹೆಚ್ಚಾಗಿದೆ.

ವಿವೇಕ್ ರಾಮಸ್ವಾಮಿ ಸೋಲು

ಇನ್ನೊಂದೆಡೆ, ರಿಪಬ್ಲಿಕನ್ ಪಕ್ಷದ ನಾಯಕ ವಿವೇಕ್ ರಾಮಸ್ವಾಮಿ ಅವರು ಓಹಿಯೋ ರಾಜ್ಯದ ಗವರ್ನರ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಆಮಿ ಆಕ್ಟನ್ ವಿರುದ್ಧ ಸೋಲು ಅನುಭವಿಸಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries