ಕಾಸರಗೋಡು: ಶಾಲೆಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್ಸಿ/ಎಸ್ಟಿ) ಸಮುದಾಯಗಳ ಮಕ್ಕಳು ಅರ್ಧಕ್ಕೇ ಶಿಕ್ಷಣ ಮೊಟಕುಗೊಳಿಸುವುದನ್ನು (ಡ್ರಾಪ್ಔಟ್) ತಡೆಗಟ್ಟಲು ಹಾಗೂ ನಿರಂತರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಲು ಬೇಡಡ್ಕ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗಿರಿಜನ ಹಾಡಿಗಳಿಗೆ ನೇರ ಭೇಟಿ ನೀಡಿ ಜಾಗೃತಿ ಮೂಡಿಸುವ ಅಭಿಯಾನ ಕೈಗೊಳ್ಳಲಾಗಿದೆ.
ಮುನ್ನಾಡ್, ಕುಂಡಂಗುಳಿ ಹಾಗೂ ಬೇಡಕಂ ಶಾಲೆಗಳಿಂದ ಮಕ್ಕಳು ಶಾಲೆ ಬಿಡುತ್ತಿರುವ ಪ್ರಕರಣಗಳು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ತಂಡ ನೇರವಾಗಿ ಹಾಡಿಗಳಿಗೆ ತೆರಳಿ ಪರಿಶೀಲನೆ ನಡೆಸಿದೆ.
ಸಮಸ್ಯೆಗಳ ಅಧ್ಯಯನ; ಪೋಷಕರಿಗೆ ಆಪ್ತಸಮಾಲೋಚನೆ
ಪಂಚಾಯತ್ ವ್ಯಾಪ್ತಿಯ ಚೆಂಬಕ್ಕಾಡ್, ಅಂಜಾಮ್ಮೈಲ್, ಪುಳಿಂಕುನ್ನು ಹಾಗೂ ಪರಯಂಪಳ್ಳಂ ಹಾಡಿಗಳ ಮನೆಗಳಿಗೆ ಭೇಟಿ ನೀಡಿದ ನಿಯೋಗವು, ಕುಟುಂಬಗಳ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ಸಮಗ್ರವಾಗಿ ಪರಿಶೀಲಿಸಿತು.

