HEALTH TIPS

ಪಂಜಾಬ್‌ನಲ್ಲಿ ರಂಗೇರಿದ ಚುನಾವಣಾ ಕಣ:ಮಾಡು ಇಲ್ಲವೇ ಮಡಿ ಹೋರಾಟಕ್ಕೆ ವೇದಿಕೆ ಸಜ್ಜು

ಚಂಡೀಗಢ:  ಪಂಜಾಬ್‌ನಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಬಾರಿ ಅಖಾಡದಲ್ಲಿರುವ ಪ್ರತಿಯೊಂದು ಪಕ್ಷಕ್ಕೂ ಇದು 'ಮಾಡು ಇಲ್ಲವೇ ಮಡಿ' ಹೋರಾಟವಾಗಿದೆ. 


ಐದು ವರ್ಷಗಳ ಹಿಂದೆ ಹೊಸ ಪಕ್ಷವಾಗಿ ಪ್ರವೇಶಿಸಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೇರಿದ್ದ ಆಮ್ ಆದ್ಮಿ ಪಾರ್ಟಿ (ಎಎಪಿ) ಇದೀಗ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ.

ಒಂದು ವೇಳೆ ಪಂಜಾಬ್‌ನಲ್ಲಿ ಎಎಪಿ ಸೋತರೆ, ದೇಶದಲ್ಲಿ ಅಧಿಕಾರದಲ್ಲಿರುವ ತನ್ನ ಏಕೈಕ ರಾಜ್ಯವನ್ನು ಅದು ಕಳೆದುಕೊಳ್ಳಲಿದೆ.

ಮತ್ತೊಂದೆಡೆ ಪಂಜಾಬ್‌ನಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದ ಶಿರೋಮಣಿ ಅಕಾಲಿ ದಳ (ಬಾದಲ್) ಇದೀಗ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸಾಲುಸಾಲು ಸಂಕಷ್ಟಗಳ ಸುಳಿಯಲ್ಲಿ ಸಿಲುಕಿರುವ ಎಸ್‌ಎಡಿ, ತನ್ನ ಹಳೆಯ ಮೈತ್ರಿಕೂಟದ ಪಾಲುದಾರ 'ಬಿಜೆಪಿ'ಯ ಬೆಂಬಲದೊಂದಿಗೆ ಮಾತ್ರ ಮೇಲೆ ಬರಲು ಸಾಧ್ಯ ಎಂದು ಅಂದಾಜಿಸಲಾಗಿದೆ.

ಶೀಘ್ರದಲ್ಲೇ ಹೊಸ ಎಸ್‌ಎಡಿ-ಬಿಜೆಪಿ ಮೈತ್ರಿ ಘೋಷಣೆಯಾಗುವ ಸಾಧ್ಯತೆಯಿದ್ದು, ಈ ಮೈತ್ರಿಯಿಲ್ಲದೆ ಎರಡೂ ಪಕ್ಷಗಳು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವುದು ಅಸಂಭವ ಎನ್ನಲಾಗಿದೆ.

'ಕೈ' ಸ್ಥಿತಿಗತಿ

2022ರ ಚುನಾವಣೆಯಂತೆ ಕಾಂಗ್ರೆಸ್ ಈ ಬಾರಿಯೂ ಭಿನ್ನವಾದದ್ದೇನನ್ನೂ ಮಾಡಿಲ್ಲ. 2022ರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಅಂದಿನ ಮುಖ್ಯಮಂತ್ರಿ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ವರಿಷ್ಠರು ಕೆಳಗಿಳಿಸಿದ್ದರು. ಆ ಜಾಗಕ್ಕೆ ದಲಿತ ನಾಯಕ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ನೇಮಿಸಲಾಗಿತ್ತು. ಪಂಜಾಬ್ ದೇಶದಲ್ಲೇ ಅತಿ ಹೆಚ್ಚು ಅಂದರೆ ಶೇ 32ರಷ್ಟು ದಲಿತ ಜನಸಂಖ್ಯೆಯನ್ನು ಹೊಂದಿದೆ.

ಇತ್ತೀಚೆಗೆ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮುಂದುವರಿಸುವ ಹೈಕಮಾಂಡ್ ನಿರ್ಧಾರದಿಂದ ಪಕ್ಷದಲ್ಲಿ ಮತ್ತೆ ಹಳೆಯ ಇತಿಹಾಸ ಮರುಕಳಿಸಿದಂತಾಗಿತ್ತು. ಬಹುಪಾಲು ನಾಯಕರು ಈ ನಿರ್ಧಾರವನ್ನು ಬಲವಾಗಿ ವಿರೋಧಿಸಿದ್ದರು.

ಬಂಡಾಯ ಶಮನಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕ ಭೂಪೇಶ್ ಬಘೇಲ್ ಹಾಗೂ ನಂತರ ಸಚಿನ್ ಪೈಲಟ್ ಅವರನ್ನು ಕಳುಹಿಸಲಾಯಿತಾದರೂ ಆ ಪ್ರಯತ್ನ ವಿಫಲವಾಯಿತು. ಅಂತಿಮವಾಗಿ ಕಾಂಗ್ರೆಸ್ ವರಿಷ್ಠರು ತಮ್ಮ ನಿರ್ಧಾರವನ್ನು ಹಿಂಪಡೆದು, ಒಲಿಂಪಿಯನ್ ಹಾಗೂ ಹಾಲಿ ಶಾಸಕ ಪರ್ಗತ್ ಸಿಂಗ್ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನದ ಹೊಣೆಗಾರಿಕೆ ನೀಡಬೇಕಾಯಿತು.

ನಾಯಕತ್ವದ ಬದಲಾವಣೆಯ ಈ ಎರಡೂ ಪ್ರಸಂಗಗಳು ಪಕ್ಷದ ತಪ್ಪು ಹೆಜ್ಜೆಗಳಾಗಿದ್ದವು. ಆದರೆ ಈ ಬಾರಿಯ ಸಮಾಧಾನಕರ ಸಂಗತಿಯೆಂದರೆ, ಹೊಸ ಬದಲಾವಣೆಗಳಿಂದ ಕಾಂಗ್ರೆಸ್ ಉತ್ಸಾಹದಲ್ಲಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಸಾಧನೆ ಮಾಡಿತ್ತು. 2017ರಲ್ಲಿ 77 ಸ್ಥಾನಗಳಿಂದ 2022ರಲ್ಲಿ 18 ಸ್ಥಾನಗಳಿಗೆ ಕುಸಿದಿತ್ತು. ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಎನ್‌ಡಿಎ ಮೂರನೇ ಬಾರಿ ಅಧಿಕಾರಕ್ಕೆ ಬಂದರೂ, ಪಂಜಾಬ್‌ನಲ್ಲಿ ಕಾಂಗ್ರೆಸ್ ಶೇ 54ರಷ್ಟು ಮತಗಳನ್ನು ಗಳಿಸಿ 13ರಲ್ಲಿ 7 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಸಾಧನೆ ಮಾಡಿತ್ತು.

ಕ್ಯಾಪ್ಟನ್ ಅಮರಿಂದರ್ ಸಿಂಗ್, ಸುನಿಲ್ ಜಾಖಡ್ ಅವರಂತಹ ದಿಗ್ಗಜರು ಬಿಜೆಪಿ ಸೇರಿದರೂ ಪಕ್ಷ ಈ ಸಾಧನೆ ಮಾಡಿತ್ತು. ಈ ಬಾರಿ ಕಾಂಗ್ರೆಸ್‌ನ ಸಾಧನೆಯು ಟಿಕೆಟ್ ಹಂಚಿಕೆ, ಚುನಾವಣಾ ತಂತ್ರಗಾರಿಕೆ ಹಾಗೂ ಅದು ರೂಪಿಸುವ ರಾಜಕೀಯ ನಿರೂಪಣೆಯ ಮೇಲೆ ನಿಂತಿದೆ.

UP Election: ಓವೈಸಿ-ಚಂದ್ರಶೇಖರ್ ಮೈತ್ರಿ; BSP, SP, BJP ಯಾರಿಗೆ ಹೊಡೆತ?ವಿಜಯ್ ಸರ್ಕಾರಕ್ಕೆ 6 ತಿಂಗಳು: ಜನಪ್ರಿಯತೆ ಅಬಾಧಿತ, ಕಾನೂನು ಸುವ್ಯವಸ್ಥೆಯೇ ಸವಾಲು

ಎಎಪಿ ಮುಂದಿರುವ ಸವಾಲುಗಳು:

ಭಾರಿ ವಿರೋಧ ಹಾಗೂ ಸವಾಲುಗಳ ನಡುವೆಯೂ ಆಮ್ ಆದ್ಮಿ ಪಾರ್ಟಿ ಪ್ರಬಲ ಸ್ಪರ್ಧಿಯಾಗಿ ಉಳಿದಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಧಾರ್ಮಿಕ ಸೇರಿದಂತೆ ಹಲವು ವಿವಾದಗಳಲ್ಲಿ ಸಿಲುಕಿದ್ದಾರೆ. ಸಿಖ್ಖರ ಅತ್ಯುನ್ನತ ಪೀಠವಾದ 'ಅಕಾಲ್ ತಖ್ತ್' ಅವರನ್ನು 'ಗುರು ದ್ರೋಹಿ' ಎಂದು ಘೋಷಿಸಿ, ಬಹಿಷ್ಕರಿಸುವಂತೆ ಕರೆ ನೀಡಿದೆ.

ಪಂಜಾಬ್‌ನಲ್ಲಿ ಮಾದಕ ವಸ್ತು (ಡ್ರಗ್ಸ್) ಪ್ರಮುಖ ಚುನಾವಣಾ ವಿಷಯವಾಗಿ ಮುಂದುವರಿದಿದೆ. ಮಾದಕವಸ್ತು ಪೂರೈಕೆಯ ಜಾಲವನ್ನು ಭೇದಿಸಲಾಗಿದೆ ಹಾಗೂ ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಎಎಪಿ ಸರ್ಕಾರ ಹೇಳಿಕೊಂಡಿದೆ. ಆದರೆ ಇದನ್ನು ತಳ್ಳಿಹಾಕಿರುವ ವಿಪಕ್ಷಗಳು, ಡ್ರಗ್ಸ್ ನಿಂದ ಆಗುತ್ತಿರುವ ಸಾವುಗಳು ಮತ್ತು ರಾಜ್ಯದಲ್ಲಿನ ಎಗ್ಗಿಲ್ಲದ ಡ್ರಗ್ಸ್ ಲಭ್ಯತೆಯತ್ತ ಬೊಟ್ಟು ಮಾಡಿವೆ.

ಮಹಿಳೆಯರಿಗೆ ಮಾಸಿಕ ಆರ್ಥಿಕ ನೆರವಿನ ಯೋಜನೆಯ ಅನುಷ್ಠಾನ ವಿಳಂಬವಾಗಿದ್ದರೂ, ಉಳಿದಂತೆ ಹಲವು ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ಮಾನ್ ಸರ್ಕಾರ ಬದ್ಧತೆ ತೋರಿದೆ.

ಈ ನಡುವೆ ಹಲವು ನಾಯಕರು ಎಎಪಿ ತೊರೆದು ಬಿಜೆಪಿ ಸೇರಿದ್ದಾರೆ. ಪಕ್ಷದ ರಾಜ್ಯಸಭಾ ಸದಸ್ಯರು ಬಿಜೆಪಿ ಪಾಲಾಗಿದ್ದು, ಇದು ರಾಘವ್ ಚಡ್ಡಾ ಅವರ ಕುಮ್ಮಕ್ಕಿನಿಂದ ನಡೆದ ಒಳಸಂಚು ಎನ್ನಲಾಗಿದೆ.

ಮತ್ತೊಂದೆಡೆ, ಹಲವು ಎಎಪಿ ಪದಾಧಿಕಾರಿಗಳು ವಿವಿಧ ಉಲ್ಲಂಘನೆಗಳಿಗಾಗಿ ಜಾರಿ ನಿರ್ದೇಶನಾಲಯ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳ ವಿಚಾರಣೆ ಎದುರಿಸುತ್ತಿದ್ದಾರೆ.

ಎಸ್‌ಎಡಿ-ಬಿಜೆಪಿ ಲೆಕ್ಕಾಚಾರ

ಸುಖ್‌ಬೀರ್‌ ಸಿಂಗ್ ಬಾದಲ್ ನೇತೃತ್ವದ ಶಿರೋಮಣಿ ಅಕಾಲಿ ದಳ ತೀವ್ರ ಬಿಕ್ಕಟ್ಟಿನಿಂದ ಪಾರಾಗಲು ಹೋರಾಡುತ್ತಿದೆ. 2022ರ ಚುನಾವಣೆಯಲ್ಲಿ ಕೇವಲ ಮೂರು ಸ್ಥಾನಗಳನ್ನು ಗೆದ್ದು (ಮತಗಳಿಕೆ ಶೇ 18ರಿಂದ ಶೇ 6.8ಕ್ಕೆ ಕುಸಿತ) ಭಾರಿ ಹಿನ್ನಡೆ ಕಂಡಿತ್ತು.

2024ರ ಲೋಕಸಭಾ ಚುನಾವಣೆಯಲ್ಲೂ ಕೇವಲ ಒಂದು ಸ್ಥಾನವನ್ನಷ್ಟೇ ಗೆದ್ದಿತ್ತು. ಸಾಲು ಸಾಲು ನಾಯಕರ ಪಕ್ಷಾಂತರ ಪಕ್ಷವನ್ನು ಕಂಗೆಡಿಸಿದೆ.

ಎಸ್‌ಎಡಿ ಸತತ 28 ವರ್ಷಗಳ ಕಾಲ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು, ಆದರೆ 2020ರ ಸೆಪ್ಟೆಂಬರ್‌ನಲ್ಲಿ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು (ಈಗ ರದ್ದಾಗಿವೆ) ವಿರೋಧಿಸಿ ಮೈತ್ರಿ ಕಡಿದುಕೊಂಡಿತ್ತು.

ಈ ಮೈತ್ರಿ ಮುರಿದುಬಿದ್ದಿದ್ದು ಬಿಜೆಪಿಗೆ ವರದಾನವಾಗಿ ಪರಿಣಮಿಸಿದೆ. ಎಸ್‌ಎಡಿ ಮಿತ್ರಪಕ್ಷವಾಗಿ ಕೇವಲ 23 ಸ್ಥಾನಗಳಲ್ಲಷ್ಟೇ ಸ್ಪರ್ಧಿಸುತ್ತಿದ್ದ ಬಿಜೆಪಿ, ಇದೀಗ ರಾಜ್ಯದಾದ್ಯಂತ ತನ್ನ ಪ್ರಭಾವ ವಿಸ್ತರಿಸಿಕೊಂಡಿದೆ. ಸುನಿಲ್ ಜಾಖಡ್ ಅವರ ರಾಜ್ಯಾಧ್ಯಕ್ಷತೆಯಲ್ಲಿ ಬಿಜೆಪಿ ಮತ ಪ್ರಮಾಣ ಮತ್ತು ವಿಧಾನಸಭಾ ಸ್ಥಾನಗಳೆರಡರಲ್ಲೂ ಗಮನಾರ್ಹ ಏರಿಕೆ ಕಂಡಿದೆ.

ಸದ್ಯಕ್ಕೆ ಬಹುತೇಕ ಖಚಿತವಾಗಿರುವ ಎಸ್‌ಎಡಿ ಹಾಗೂ ಬಿಜೆಪಿ ಮರುಮೈತ್ರಿಯು ಎರಡೂ ಪಕ್ಷಗಳಿಗೆ ಅತ್ಯಂತ ನಿರ್ಣಾಯಕವಾಗಿದೆ. ಈ ಬಾರಿ ಬಿಜೆಪಿ ಹಿಂದಿಗಿಂತ ದುಪ್ಪಟ್ಟು ಸ್ಥಾನಗಳಿಗೆ ಬೇಡಿಕೆ ಇಟ್ಟರೂ, ಅದಕ್ಕೆ ಒಪ್ಪಿಕೊಳ್ಳುವ ಅನಿವಾರ್ಯತೆ ಹಾಗೂ ಸೀಮಿತ ಆಯ್ಕೆಗಳು ಮಾತ್ರವೇ ಅಕಾಲಿ ದಳದ ಮುಂದಿವೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries