ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ ನಾಲ್ಕು ಪ್ರಶ್ನೆಗಳನ್ನು ಕೇಳಿದ್ದಾರೆ.
ಚೀನಾದ ಶೆನ್‌ಜೆನ್‌ನಲ್ಲಿ ಇದೇ ವಾರ ನಡೆದ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (ಎಪಿಇಸಿ) ಒಕ್ಕೂಟದ ಶೃಂಗಸಭೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಜರಾಗಿದ್ದರು.
ಇದೇ ವೇಳೆ ಅವರಿಬ್ಬರೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ತ್ರಿಪಕ್ಷೀಯ ಸಭೆ ನಡೆಸಿದ್ದರು.
ಮೂವರೂ ನಾಯಕರು ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭದ ಚಿತ್ರ ಹಂಚಿಕೊಂಡಿದ್ದ ರಾಹುಲ್, ‘ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ, ಭಾರತದ ಪ್ರಧಾನಿಯೂ ಈ ಸಭೆಯಲ್ಲಿ ಇರುತ್ತಿದ್ದರು’ ಎಂದಿದ್ದರು. ಮೋದಿ ಅವರನ್ನು ಟೀಕಿಸಿ, ‘ರಾಜಿ ಮಾಡಿಕೊಂಡಿರುವ ಪ್ರಧಾನಿಯು ಈ ಸಭೆಯಲ್ಲಿ ಪಾಲ್ಗೊಳ್ಳಲು ಎಂದಿಗೂ ಸಾಧ್ಯವಿಲ್ಲ’ ಎಂದು ಬರೆದುಕೊಂಡಿದ್ದರು.
ಇದಕ್ಕೆ ತಿರುಗೇಟು ನೀಡಿರುವ ರಿಜಿಜು, ರಾಹುಲ್ ಎದುರು ನಾಲ್ಕು ಪ್ರಶ್ನೆಗಳನ್ನು ಇಟ್ಟಿದ್ದಾರೆ.
1962ರಲ್ಲಿ ನನ್ನ ಹಳ್ಳಿಯನ್ನು ಚೀನಾ ಆಕ್ರಮಿಸಿತು. ಆ ಅಪಮಾನಕ್ಕಾಗಿ ಕಾಂಗ್ರೆಸ್ ಕ್ಷಮೆ ಯಾಚಿಸುವುದೇ? ಕಾಂಗ್ರೆಸ್ ಪಕ್ಷ ಭಾರತವನ್ನು ಬಡ ರಾಷ್ಟ್ರವಾಗಿಯೇ ಉಳಿಸಿದ್ದು ಏಕೆ? ಭಾರತವನ್ನು ‘ಹಾವಾಡಿಗರ ದೇಶ’ ಎಂದು ಕರೆಯುತ್ತಿದ್ದದ್ದು ಏಕೆ? ಭಾರತದ ಆರ್ಥಿಕತೆಯನ್ನು ‘ಹಿಂದೂ ಬೆಳವಣಿಗೆ ದರ’ ಎಂದು ಕರೆದು ಅವಮಾನಿಸಿದ್ದು ಏತಕ್ಕೆ? ಎಂದು ಪ್ರಶ್ನಿಸಿದ್ದಾರೆ.
ಚೀನಾ, ರಷ್ಯಾ, ಅಮೆರಿಕ ನಾಯಕರ ಸಭೆ ವೇಳೆ ರಾಹುಲ್ ಗಾಂಧಿ ಅವರು ಪಾನೀಯ ಪೂರೈಸುತ್ತಿರುವಂತೆ ಎಐ ಮೂಲಕ ಎಡಿಟ್ ಮಾಡಿದ ಚಿತ್ರವನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ಭಾರತದ ಪ್ರಧಾನಿಯೂ ಜಾಗತಿಕ ನಾಯಕರ ಸಭೆಯಲ್ಲಿ ಇರುತ್ತಿದ್ದರು ಎಂಬ ರಾಹುಲ್ ಟ್ವೀಟ್ ಜೊತೆ ಈ ಫೋಟೊ ಹಂಚಿಕೊಂಡಿರುವ ಗೌರವ್, ‘ಇಂತಹದ್ದೇನೋ ಆಗಿರುತ್ತಿತ್ತು’ ಎಂದು ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿಗೆ ‘ಭೌಗೋಳಿಕ ರಾಜಕೀಯ’ದ ಬಗ್ಗೆ ಯಾವುದೇ ಜ್ಞಾನವಿಲ್ಲ. ಅವರು ಪಾಕಿಸ್ತಾನದ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ರಾಷ್ಟ್ರೀಯ ಮಾಧ್ಯಮ ಸಂಚಾಲಕ ಆಶಿಶ್ ಉಷಾ ಅಗರ್ವಾಲ್, ಅಮೆರಿಕ, ರಷ್ಯಾ ಮತ್ತು ಚೀನಾ ನಡುವಿನ ತ್ರಿಪಕ್ಷೀಯ ಮಾತುಕತೆಯು ಭಾರತವು ಜಾಗತಿಕವಾಗಿ ಹೊಂದಿರುವ ಸ್ಥಾನಮಾನವನ್ನು ನಿರ್ಧರಿಸುವುದಿಲ್ಲ ಎಂದು ಹೇಳಿದ್ದಾರೆ.
‘ರಾಹುಲ್ ಅವರಿಗೆ ಪಾಕಿಸ್ತಾನದ ಪರ ಅತಿಯಾದ ಪ್ರೀತಿ ಇದೆ. ವಿದೇಶಾಂಗ ನೀತಿಯ ಬಗ್ಗೆ ಮಾತನಾಡುವಾಗ ಅವರು ಪಾಕಿಸ್ತಾನವನ್ನು ಮಾದರಿಯಾಗಿ ಇಟ್ಟುಕೊಳ್ಳುತ್ತಾರೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಎಕ್ಸ್ ಪೋಸ್ಟ್‌ನಲ್ಲಿ ದೂರಿದ್ದಾರೆ.


