ಮುಂಬೈ: ಮುಂಬೈನ ದಾದರ್ ಮೆಟ್ರೋ ನಿಲ್ದಾಣಕ್ಕೆ 'ಚೈತ್ಯಭೂಮಿ' ಎಂದು ಮರುನಾಮಕರಣ ಮಾಡುವ ಮಹಾರಾಷ್ಟ್ರ ಸರ್ಕಾರದ ನಡೆ ನಡುವೆಯೇ, ನಾಗ್ಪುರ ನಗರದ ಹೆಸರನ್ನು 'ದೀಕ್ಷಾಭೂಮಿ' ಎಂದು ಬದಲಾಯಿಸಬೇಕು ಎಂಬ ಬೇಡಿಕೆಯನ್ನು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಮುಂದಿಟ್ಟಿದ್ದಾರೆ.
1956ರ ಅಕ್ಟೋಬರ್‌ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು ಇದೇ ನಾಗ್ಪುರದಲ್ಲಿ. ಮಾಧ್ಯಮಗಳೊಂದಿಗೆ ಮಾತನಾಡಿದ ರಾವುತ್, "ದೇಶದ ಜನರಿಗೆ ಡಾ. ಅಂಬೇಡ್ಕರ್ ಅವರ ಮೇಲೆ ಅಪಾರ ಗೌರವ ಮತ್ತು ನಂಬಿಕೆ ಇದೆ. ದಾದರ್ ಕೇವಲ ಒಂದು ನಿಲ್ದಾಣವಷ್ಟೇ. ನಾಗ್ಪುರವನ್ನು 'ದೀಕ್ಷಾಭೂಮಿ' ಎಂದು ಮರುನಾಮಕರಣ ಮಾಡುವುದೇ ಡಾ. ಅಂಬೇಡ್ಕರ್ ಅವರಿಗೆ ನೀಡುವ ಅತ್ಯುನ್ನತ ಗೌರವವಾಗಲಿದೆ. ಮುಖ್ಯಮಂತ್ರಿಗಳು ಈ ಕುರಿತು ಪ್ರಸ್ತಾವನೆ ತರಲಿ, ನಾವು ಬೆಂಬಲಿಸುತ್ತೇವೆ. ಡಾ. ಅಂಬೇಡ್ಕರ್ ಅವರ ಜೀವನದ ಸಾಮಾಜಿಕ ಕ್ರಾಂತಿ ಆರಂಭವಾಗಿದ್ದೇ ನಾಗ್ಪುರದ ದೀಕ್ಷಾಭೂಮಿಯಿಂದ. ಈ ವಿಚಾರದಲ್ಲಿ ಯಾವುದೇ ವಿವಾದಗಳು ಎದುರಾದರೂ ನಾವು ಸರ್ಕಾರದ ಜೊತೆ ನಿಲ್ಲುತ್ತೇವೆ" ಎಂದು ಹೇಳಿದರು.
ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಮುಂಬೈನ ದಾದರ್ ಮೆಟ್ರೋ ನಿಲ್ದಾಣಕ್ಕೆ 'ಚೈತ್ಯಭೂಮಿ' ಎಂದು ಹೆಸರಿಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಇತ್ತೀಚೆಗೆ ತಿಳಿಸಿದ್ದರು. 1956ರ ಡಿಸೆಂಬರ್‌ನಲ್ಲಿ ಡಾ. ಅಂಬೇಡ್ಕರ್ ನಿಧನರಾದ ಬಳಿಕ ಮಧ್ಯ ಮುಂಬೈನ ದಾದರ್‌ನಲ್ಲಿರುವ ಚೈತ್ಯಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತ್ತು.
ಕಾಂಗ್ರೆಸ್ ಸಂಪೂರ್ಣ ಬೆಂಬಲ: ರಾವುತ್ ಅವರ ಈ ಬೇಡಿಕೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ವಿಜಯ್ ವಡೆತ್ತಿವಾರ್ ಬೆಂಬಲ ವ್ಯಕ್ತಪಡಿಸಿದ್ದಾರೆ. "ನಾಗ್ಪುರಕ್ಕೆ ದೀಕ್ಷಾಭೂಮಿ ಎಂದು ಹೆಸರಿಡಬೇಕು. ಹೆಸರು ಬದಲಾಯಿಸುವುದರಲ್ಲಿ ಏನು ಸಮಸ್ಯೆ ಇದೆ?" ಎಂದು ಅವರು ಪ್ರಶ್ನಿಸಿದ್ದಾರೆ. ದೇಶದ ಪ್ರಜಾಪ್ರಭುತ್ವವನ್ನು ಯಾವುದೇ ಸರ್ವಾಧಿಕಾರಿಗೂ ನಾಶಪಡಿಸಲು ಸಾಧ್ಯವಾಗದ ರೀತಿಯಲ್ಲಿ ಡಾ. ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ ಮತ್ತು ಪ್ರಪಂಚದಾದ್ಯಂತದ ಜನರು ದೀಕ್ಷಾಭೂಮಿಗೆ ಭೇಟಿ ನೀಡುತ್ತಾರೆ ಎಂದಿರುವ ವಡೆತ್ತಿವಾರ್, ಸಂಜಯ್ ರಾವುತ್ ಅವರ ಬೇಡಿಕೆಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ತಿರುಗೇಟು: ಮತ್ತೊಂದೆಡೆ, ದಾದರ್ ಮೆಟ್ರೋ ನಿಲ್ದಾಣವನ್ನು 'ಚೈತ್ಯಭೂಮಿ' ಎಂದು ಮರುನಾಮಕರಣ ಮಾಡುವ ನಿರ್ಧಾರವನ್ನು ರಾವುತ್ ಮೊದಲು ಸ್ವಾಗತಿಸಬೇಕು ಎಂದು ಮಹಾರಾಷ್ಟ್ರ ಬಿಜೆಪಿ ವಕ್ತಾರ ನವನಾಥ್ ಬಾನ್ ಹೇಳಿದ್ದಾರೆ. ದಾದರ್ ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆ ಯೋಜನೆಯನ್ನು ವಿರೋಧಿಸಲು ಶಿವಸೇನೆ (ಯುಬಿಟಿ) ನಾಯಕರು ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು (ಎಂಎನ್‌ಎಸ್) ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. "ರಾವುತ್ ಎಂದಿಗೂ ಚೈತ್ಯಭೂಮಿಗೆ ಹೋಗಿಲ್ಲ, ಡಾ. ಅಂಬೇಡ್ಕರ್ ಅವರ ವಿಚಾರಗಳನ್ನೂ ಪ್ರಚಾರ ಮಾಡಿಲ್ಲ. ಇಂತಹವರಿಗೆ ಈ ವಿಷಯದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ" ಎಂದು ಬಾನ್ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಚಂದ್ರಶೇಖರ್ ಬವಾನ್ಕುಲೆ, "ನಾಗ್ಪುರವು ದೀಕ್ಷಾಭೂಮಿಯ ಹೆಸರಿನಿಂದಲೇ ಪ್ರಸಿದ್ಧವಾಗಿದೆ. ನಾಗ್ಪುರಕ್ಕೆ ಬರುವ ಪ್ರತಿಯೊಬ್ಬ ವ್ಯಕ್ತಿಯೂ ದೀಕ್ಷಾಭೂಮಿಗೆ ಭೇಟಿ ನೀಡುತ್ತಾರೆ" ಎಂದು ತಿಳಿಸಿದ್ದಾರೆ.



