ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಟ್ಯಾಂಕರ್ ಲಾರಿಯೊಂದರಲ್ಲಿ ತಂದು ಮನೆ ಪರಿಸರದ ತೆರೆದ ಜಾಗಕ್ಕೆ ಶೌಚಾಲಯ ತ್ಯಾಜ್ಯವನ್ನು ಸುರಿದಿರುವ ಘಟನೆಗೆ ಸಂಬಂಧಿಸಿದಂತೆ, ಮನೆ ಮಾಲೀಕರು ನೀಡಿದ ದೂರಿನ ಆಧಾರದಲ್ಲಿ ಪಂಚಾಯತ್ ಅಧಿಕಾರಿಗಳು ಹಾಗೂ ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜಂಟಿ ತನಿಖೆ ಆರಂಭಿಸಿದ್ದಾರೆ.
ಪೈವಳಿಕೆ ಪಂಚಾಯಿತಿಯ ಏದಾರ್ ನಿವಾಸಿ ರಾಮ ಎಂಬವರ ಮನೆಯ ವಠಾರ ಹಾಗೂ ಸಮೀಪದ ವಿವಿಧೆಡೆ ಶುಕ್ರವಾರ ತಡರಾತ್ರಿ ಈ ಕೃತ್ಯ ನಡೆದಿದೆ. ರಸ್ತೆಯಲ್ಲಿ ಟ್ಯಾಂಕರ್ ಲಾರಿಯನ್ನು ನಿಲ್ಲಿಸಿ, ಪೈಪ್ಗಳ ಮೂಲಕ ತಗ್ಗು ಪ್ರದೇಶಕ್ಕೆ ಅಕ್ರಮವಾಗಿ ಮಲಿನ ನೀರನ್ನು ಹರಿಯಬಿಡಲಾಗಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ದುರ್ವಾಸನೆ ಹರಡಿದ್ದು, ಸಾಂಕ್ರಾಮಿಕ ರೋಗ ಭೀತಿಯಿಂದ ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ತ್ಯಾಜ್ಯ ಸುರಿದು ಪರಾರಿಯಾಗಿರುವ ಟ್ಯಾಂಕರ್ ಲಾರಿಯನ್ನು ಪತ್ತೆಹಚ್ಚಲು ಮಂಜೇಶ್ವರ ಪೊಲೀಸರು ಪರಿಸರದ ಪ್ರಮುಖ ರಸ್ತೆಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

