HEALTH TIPS

ಕಾಸರಗೋಡನ್ನು ಕರ್ನಾಟಕಕ್ಕೆ ವಿಲೀನಗೊಳಿಸುವ ಹೇಳಿಕೆಗೆ ಆಡಳಿತ ಭಾಷಾ ಸಂರಕ್ಷಣಾ ಸಮಿತಿ ವಿರೋಧ; ಭಾಷಾ ವೈವಿಧ್ಯತೆ ಒಗ್ಗಟ್ಟಿನ ಬುನಾದಿ ಎಂದು ಪ್ರತಿಪಾದನೆ

ಕಾಸರಗೋಡು: ಕಾಸರಗೋಡು ಜಿಲ್ಲೆಯನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸಬೇಕೆಂಬ ಕನ್ನಡ ವಿದ್ವಾಂಸ ಹಾಗೂ ಸಾಹಿತಿ ಡಾ. ರಮಾನಂದ ಬನಾರಿ ಅವರ ಹೇಳಿಕೆಯ ವಿರುದ್ಧ ಆಡಳಿತ ಭಾಷಾ ಸಂರಕ್ಷಣಾ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇಂತಹ ಹೇಳಿಕೆಗಳು ಜನರಲ್ಲಿ ಅನಾವಶ್ಯಕ ಗೊಂದಲ ಮತ್ತು ವಿಭಜನೆಯನ್ನು ಸೃಷ್ಟಿಸುತ್ತವೆ ಎಂದು ಸಮಿತಿಯ ಅಧ್ಯಕ್ಷ ಮಹಮೂದ್ ಕೈಕಂಬ ತಿಳಿಸಿದ್ದಾರೆ.

ಮಂಗಳೂರಿನ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಮತ್ತು ಕಲ್ಕೂರ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಡಾ. ರಮಾನಂದ ಬನಾರಿ, ಕಾಸರಗೋಡನ್ನು ಭೌಗೋಳಿಕವಾಗಿ ಕರ್ನಾಟಕಕ್ಕೆ ವಿಲೀನಗೊಳಿಸಬೇಕೆಂದು ಆಗ್ರಹಿಸಿದ್ದರು. ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳ ಪರಿಹಾರಕ್ಕೆ ಹೊಸ ಪ್ರಯತ್ನಗಳಾಗಬೇಕು, ಯಕ್ಷಗಾನ ಸೇರಿದಂತೆ ಹಲವು ಕಲೆಗಳ ಬೆಳವಣಿಗೆಯಲ್ಲಿ ಕಾಸರಗೋಡಿನ ಪಾತ್ರ ದೊಡ್ಡದಿದೆ ಹಾಗೂ ಮಹಾಜನ್ ವರದಿಯಲ್ಲೂ ವಿಲೀನಕ್ಕೆ ಶಿಫಾರಸು ಮಾಡಲಾಗಿದೆ ಎಂದಿದ್ದ ಅವರು, ಈ ವಿಚಾರದಲ್ಲಿ ಜನಪ್ರತಿನಿಧಿಗಳ ಮೌನವನ್ನು ಪ್ರಶ್ನಿಸಿದ್ದರು.

'ಕಾಸರಗೋಡು ಭಾಷಾ ಸಂಗಮಭೂಮಿ' ಬನಾರಿ ಅವರ ಹೇಳಿಕೆಗೆ ಅಸಮ್ಮತಿ ವ್ಯಕ್ತಪಡಿಸಿರುವ ಸಮಿತಿ, ಕಾಸರಗೋಡು ವಿವಿಧ ಭಾಷೆ ಮತ್ತು ಸಂಸ್ಕೃತಿಗಳ ಸಂಗಮಭೂಮಿಯಾಗಿದೆ ಎಂದಿದೆ. ಮಲಯಾಳಂ, ಕನ್ನಡ, ಉರ್ದು, ತುಳು, ಕೊಂಕಣಿ, ಮರಾಠಿ, ಬ್ಯಾರಿ ಭಾಷಿಕರು ಇಲ್ಲಿ ಸೌಹಾರ್ದತೆಯಿಂದ ಬದುಕುತ್ತಿದ್ದು, ಮಂಜೇಶ್ವರ ತಾಲೂಕು ಬಹುಭಾಷಾ ಸಹಬಾಳ್ವೆಗೆ ಮಾದರಿಯಾಗಿದೆ. ಭಾಷಾ ವೈವಿಧ್ಯತೆಯನ್ನು ವಿಭಜನೆಯ ಕಾರಣವಾಗಿ ನೋಡದೆ, ಜಿಲ್ಲೆಯ ಸಾಂಸ್ಕೃತಿಕ ಸಂಪತ್ತಾಗಿ ಪರಿಗಣಿಸಬೇಕು. ಎಲ್ಲಾ ಭಾಷಿಕರಿಗೂ ಸಮಾನ ಹಕ್ಕು ಮತ್ತು ಗೌರವ ಸಿಗಬೇಕು ಎಂದು ಮಹಮೂದ್ ಕೈಕಂಬ ಹೇಳಿದ್ದಾರೆ.

ಕಾಸರಗೋಡು ಕೇರಳದ ಅವಿಭಾಜ್ಯ ಅಂಗ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯ ಜೊತೆಗೆ ಮಲಯಾಳಂ ಭಾಷೆ ಹಾಗೂ ಕಾಸರಗೋಡಿನ ತನಕ ಪರಂಪರೆಯನ್ನು ಉಳಿಸಿಕೊಳ್ಳುವುದು ಅಗತ್ಯ. ಕಾಸರಗೋಡಿನ ಭವಿಷ್ಯದ ಕುರಿತಾದ ಚರ್ಚೆಗಳು ಐತಿಹಾಸಿಕ ಸತ್ಯಗಳು ಮತ್ತು ಸಾಂವಿಧಾನಿಕ ಚೌಕಟ್ಟಿನಲ್ಲಿ ನಡೆಯಬೇಕು. ಕಾಸರಗೋಡು ಕೇರಳದ ಅವಿಭಾಜ್ಯ ಅಂಗವಾಗಿದ್ದು, ಭಾಷಾ ವೈವಿಧ್ಯತೆ ಒಗ್ಗಟ್ಟಿನ ಬುನಾದಿಯಾಗಿದೆ. 80ರ ದಶಕದಲ್ಲೂ ವಿಲೀನಕ್ಕಾಗಿ ಸಂಘಟಿತ ಪ್ರಯತ್ನಗಳು ನಡೆದಿದ್ದರೂ ಸಾರ್ವಜನಿಕ ಬೆಂಬಲ ಸಿಗದೆ ಅವು ತಣ್ಣಗಾಗಿದ್ದವು ಎಂದು ಸಮಿತಿ ಸ್ಮರಿಸಿದೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries